LATEST NEWS
ಉಡುಪಿ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಸಂಜೆ ದಿಢೀರ್ ಮಳೆ…!!

ಉಡುಪಿ ಎಪ್ರಿಲ್ 11: ಬಿಸಿಲಿನಿಂದ ಕಂಗೆಟ್ಟಿದ್ದ ಕರಾವಳಿಯ ಕೆಲವು ಪ್ರದೇಶಗಳಿಗೆ ನಿನ್ನೆಯಿಂದ ಮಳೆಯ ಸಿಂಚನವಾಗಿದೆ. ಉಡುಪಿಯ ಬಿರುಬಿಸಿಲಿನ ನಡುವೆ ಮುಸ್ಸಂಜೆ ವೇಳೆ ಹಲವೆಡೆ ಭಾರೀ ಮಳೆಯಾಗಿದೆ. ಗುಡುಗು-ಸಿಡಿಲು ಬಿರುಗಾಳಿ ಸಹಿತ ಮಳೆಯಾಗಿದ್ದು, ವಾತಾವರಣ ತಂಪಾಗಿದೆ. ಪಶ್ಚಿಮ ಘಟ್ಟದ ತಪ್ಪಲಿನ ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ವರ್ಷಧಾರೆಯಾಗಿದ್ದು, ದಿಢೀರ್ ಮಳೆಯಿಂದ ಕೆಲ ವಾಹನ ಸವಾರರಿಗೆ ಸಮಸ್ಯೆ ಆಗಿದೆ.
ಇಂದು ಕೂಡ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಮುಂದುವರೆಯಲಿದ್ದು, ಇಂದಿನಿಂದ ಎಪ್ರಿಲ್ 14ರವರೆಗೆ 3 ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ. ನಾಳೆಯಿಂದ 2 ದಿನಗಳ ಕಾಲ ಮಳೆ ಹೆಚ್ಚಳವಾಗಿದ್ದು, ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ನಿನ್ನೆ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗಿದೆ. ಜೊತೆಗೆ, ಉತ್ತರ ಕರ್ನಾಟಕದಲ್ಲಿಯೂ ಗುಡುಗು ಸಹಿತ ಮಳೆಯಾಗಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಇಂದಿನಿಂದ ಏಪ್ರಿಲ್ 14ರವರೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಬೀದರ್, ಬೆಳಗಾವಿ, ಧಾರವಾಡ, ವಿಜಯಪುರ, ಯಾದಗಿರಿ, ಕಲಬುರ್ಗಿಯಲ್ಲೂ ಇಂದಿನಿಂದ ಮಳೆ ಚುರುಕುಗೊಳ್ಳಲಿದೆ. ಶಿವಮೊಗ್ಗ, ಕೊಡಗಿನಲ್ಲೂ ಮಳೆ ಹೆಚ್ಚಳವಾಗುವ ಸಾಧ್ಯತೆಯಿದೆ.