BELTHANGADI
ಮಳೆ ಅಬ್ಬರ -ಧುಮ್ಮಿಕ್ಕಿ ಹರಿದ ಬಂಡಾಜೆ ಅಬ್ಬಿ ಫಾಲ್ಸ್ ವಿಡಿಯೋ ವೈರಲ್
ಬೆಳ್ತಂಗಡಿ ನವೆಂಬರ್ 17: ಪಶ್ಚಿಮ ಘಟ್ಟ ವ್ಯಾಪ್ತಿಯ ಚಿಕ್ಕಮಗಳೂರು ಭಾಗದ ದಟ್ಟಾರಣ್ಯ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಳ್ತಂಗಡಿ ತಾಲೂಕಿನ ದಿಡುಪೆ, ಮಲವಂತಿಗೆ, ಮಿತ್ತಬಾಗಿಲು ಪರಿಸರದಲ್ಲಿ ನದಿ ಪಾತ್ರಗಳು ಏಕಾಏಕಿ ಉಕ್ಕಿ ಹರಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಜಲಪಾತದ ವಿಡಿಯೋ ಒಂದು ಇದೀಗ ವೈರಲ್ ಆಗಿದೆ.
ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ ಬಂಡಾಜೆ ಅಬ್ಬಿ ಫಾಲ್ಸ್ ಇದಾಗಿದ್ದು, ಭಾರಿ ಮಳೆಯ ಹಿನ್ನಲೆ ರಾಷ್ಟ್ರೀಯ ಉದ್ಯಾನವನದಂಚಿನ ಈ ಬಂಡಾಜೆ ಅರ್ಬಿ ಫಾಲ್ಸ್‌ನಲ್ಲಿ ಮಣ್ಣುಮಿಶ್ರಿತ ನೀರು ಧುಮ್ಮಿಕ್ಕಿ ಹರಿದ ಪರಿಣಾಮ ಗುಡ್ಡ ಪ್ರದೇಶ ಕುಸಿದಂತೆ ಭಾಸವಾಗಿತ್ತು. ಈ ಜಲಪಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಭಾರಿ ಮಳೆಯ ಪರಿಣಾಮ ದಿಡುಪೆ ಪರಿಸರವಾಗಿ ಹರಿಯುವ ನಂದಿಕಾಡು ಹೊಳೆ, ಆನಡ್ಕ, ನೇತ್ರಾವತಿ ನದಿ, ಕರಿಯಂದೂರು ಹೊಳೆ, ಕುಕ್ಕಾವು ಹೊಳೆಗಳಲ್ಲಿ ನೀರು ಏಕಾಏಕಿ ಹರಿದಿದ್ದು, ರಭಸವಾಗಿ ಹರಿಯಲಾರಂಭಿಸಿವೆ. ಇನ್ನು ಈ ಪ್ರದೇಶದ ಸುತ್ತಮುತ್ತಲಿನ ಮನೆಗಳ ಅಂಗಳದಲ್ಲಿ ರಾಶಿ ಹಾಕಿದ ಅಡಿಕೆಗಳು ಕೊಚ್ಚಿಹೋಗಿವೆ. ಅಲ್ಲದೇ, ತೋಟ, ಗದ್ದೆಗಳಿಗೂ ನೀರು ನುಗ್ಗಿದ್ದು, ಅಡಿಕೆ ಮರದ ಕಾಲು ಸಂಕವೂ ಕೊಚ್ಚಿಹೋಗುವ ಮಟ್ಟಿಗೆ ನೀರು ನುಗ್ಗಿತ್ತು.