LATEST NEWS
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬೇಸಿಗೆ ಮಳೆಗೆ ಅವಾಂತರ – ಗಾಳಿ ಮಳೆಗೆ ಅಪಾರ ಹಾನಿ

ಮೂಡುಬಿದಿರೆ ಎಪ್ರಿಲ್ 23: ಸಂಜೆ ವೇಳೆ ಬೀಸಿದ ಭಾರೀ ಗಾಳಿ ಮಳೆಗೆ ಮರಗಳು, ವಿದ್ಯುತ್ ತಂತಿಗಳು ಉರುಳಿ ಬಿದ್ದು ಹಲವು ಕಡೆ ಹಾನಿಯುಂಟಾದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ನಡೆದಿದೆ.
ಮೂಡುಬಿದಿರೆ -ಬಂಟ್ವಾಳ ರಾಜ್ಯ ಹೆದ್ದಾರಿ ಹಾದು ಹೋಗುವ ಬಿರಾವು ಗಾಜಿಗಾರ ಪಲ್ಕೆಯಲ್ಲಿ ಚಲಿಸುತ್ತಿದ್ದ ಕಾರೊಂದರ ಮೇಲೆ ಮರ ಮುರಿದುಬಿದ್ದು ಕಾರು ಜಖಂಗೊಂಡಿದೆ. ಸುದೈವವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಕೆಲಕಾಲ ಬೀಸಿದ ಗಾಳಿಗೆ ಹಲವು ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ಕಂಬಗಳು ನೆಲಕ್ಕಪ್ಪಳಿಸಿದ್ದು ಮಾರ್ಗದಲ್ಲಿ ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು. ಅರಣ್ಯ ಇಲಾಖೆ, ಮೆಸ್ಕಾಂ ಹಾಗೂ ಪೊಲೀಸರು ಮರಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ವೇಣೂರು ಮಾರ್ಗದಲ್ಲಿ ಮಾರೂರು ಶಾಲೆಯ ಬಳಿ ರಜಾಕ್ ಅವರ ಮನೆ ಮೇಲೆ ಮರ ಉರುಳಿ ಬಿದ್ದು ಮನೆಗೆ ತೀವ್ರ ಹಾನಿಯುಂಟಾಗಿದೆ.

ಮಾರೂರು ವ್ಯಾಪ್ತಿಯಲ್ಲಿ ದಲಿತರ ಕಾಲನಿಯಲ್ಲಿ ವಿದ್ಯುತ್ ತಂತಿಗಳ ಮೇಲೆ ಬೃಹತ್ ಮರಬಿದ್ದು, ವಿದ್ಯುತ್ ಸಂಪರ್ಕ ಖಡಿತಗೊಂಡಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಪಾಣೆಮಂಗಳೂರು ಗ್ರಾಮದ ಗಿರಿಧರ ಕಾಮತ್ ಅವರಿಗೆ ಸೇರಿದ ಅಕ್ಕಿ ಗಿರಣಿಯ ಮೇಲ್ಪಾವಣಿಯ ಹಂಚುಗಳು ಗಾಳಿಗೆ ಹಾರಿ ಹಾನಿಗೀಡಾಗಿದೆ. ಹಾಮದ್ ಬಾವ ಹಾಗೂ ಉಸ್ಮಾನ್ ಅವರ ಮನೆಗಳ ಮೇಲ್ಪಾವಣಿಯ ಹಂಚುಗಳಿಗೂ ಹಾನಿಯಾಗಿದೆ. ವಸಂತಿ ಮೋನಪ್ಪ ಅವರ ಮನೆ ಮೇಲೆ ಮರ ಬಿದ್ದ ಪರಿಣಾಮ ಹಾನಿಯುಂಟಾಗಿದೆ. ಇನ್ನು ಗಾಳಿಯಿಂದಾಗಿ ಶೇಖಬ್ಬ ಅವರ ಮನೆಗೆ ಹಾನಿಯಾಗಿದೆ. ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆಯ ಕುಲ್ಲುಂಬಿ ಅವರ ಮನೆಯ ಹಿಂಬದಿಯ ಗೋಡೆ ಹಾಗೂ ಮೇಲ್ಬಾವಣಿಯ ಸುಮಾರು 12 ಶೀಟ್‌ಗಳಿಗೆ ಗಾಳಿ ಮಳೆಯಿಂದ ಹಾನಿಯಾಗಿದೆ. ಕೊಟ್ಟುಂಜದಲ್ಲಿ ಪ್ರವೀಣ್ ಆಳ್ವ ಅವರ ತೋಟದಲ್ಲಿದ್ದ ಮರವು ಗಾಳಿ ಮಳೆಗೆ ಬಿದ್ದು ಸುಮಾರು 35 ಅಡಿಕೆ ಮರಗಳು ಹಾನಿಗೊಳಗಾಗಿದೆ.