LATEST NEWS
ರೈಲುಗಳ ಸಮಯವನ್ನು ರೈಲ್ವೆ ಇಲಾಖೆಯ ಅಧಿಕೃತ ಆ್ಯಪ್ ಮೂಲಕವೇ ಪರಿಶೀಲಿಸಲು ಪ್ರಯಾಣಿಕರಿಗೆ ಸೂಚನೆ

ಮಂಗಳೂರು, ಜೂನ್ 16: ರೈಲುಗಳ ಸಮಯವನ್ನು ರೈಲ್ವೆ ಇಲಾಖೆಯ ಅಧಿಕೃತ ಆ್ಯಪ್ ಗಳ ಮೂಲಕವೇ ಪರಿಶೀಲಿಸಲು ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಮನವಿ ಮಾಡಿದೆ. ಹಲವರು ಅನಧಿಕೃತ ಆ್ಯಪ್ ಗಳಲ್ಲಿ ರೈಲ್ವೆ ಸಮಯವನ್ನು ನೋಡಿ ರೈಲುಗಳನ್ನು ತಪ್ಪಿಸಿಕೊಳ್ಳುತ್ತಿರುವ ಪ್ರಕರಣ ಹೆಚ್ಚಾದ ಹಿನ್ನಲೆ ರೈಲ್ವೆ ಇಲಾಖೆ ಸೂಚನೆ ನೀಡಿದೆ.
ಹೆಚ್ಚಿನ ಪ್ರಯಾಣಿಕರು ಖಾಸಗಿ ಆ್ಯಪ್‌ಗಳ ಮೂಲಕ ಸಮಯ ಪರಿಶೀಲಿಸುತ್ತಿದ್ದಾರೆ. ಅದರಲ್ಲಿ ಇತ್ತೀಚಿನ ಮಾನ್ಸೂನ್ ವೇಳಾಪಟ್ಟಿಗಳು ಇನ್ನೂ ದಾಖಲಾಗಿಲ್ಲ. ಪ್ರಸ್ತುತ ಕೆಲವು ರೈಲುಗಳು ನಿಗದಿತ ಅವಧಿಗಿಂತ ಬೇಗ ಸಂಚರಿಸುತ್ತಿದ್ದು, ಇದರಿಂದ ಪ್ರಯಾಣಿಕರಿಗೆ ರೈಲುಗಳು ಕೈ ತಪ್ಪುವ ಸಾಧ್ಯತೆ ಇರುತ್ತದೆ. ರವಿವಾರವೂ ಕೆಲವು ಪ್ರಯಾಣಿಕರಿಗೆ ಮತ್ತ್ವಗಂಧ ರೈಲು ತಪ್ಪಿದೆ. ಮಧ್ಯಾಹ್ನ 12.45 ಕ್ಕೆ ಮಂಗಳೂರಿನಿಂದ ಹೊರಡುವ ಈ ರೈಲಿನ ಸಮಯವನ್ನು ಖಾಸಗಿ ಆ್ಯಪ್ ಒಂದರಲ್ಲಿ ಮಧ್ಯಾಹ್ನ 2.30 ಎಂದು ತೋರಿಸಲಾಗಿತ್ತು. ಆದ್ದರಿಂದ ಪ್ರಯಾಣಿಕರು ಎನ್‌ಟಿಇಎಸ್ ಆ್ಯಪ್ ಮೂಲಕ ಅಥವಾ ರೈಲ್ವೇ ವಿಚಾರಣೆ ಸಂಖ್ಯೆ 139ಕ್ಕೆ ಸಂಪರ್ಕಿಸುವ ಮೂಲಕ ಸಮಯವನ್ನು ತಿಳಿದುಕೊಳ್ಳಬಹುದು ಎಂದು ಇಲಾಖೆ ಪ್ರಕಟನೆ ತಿಳಿಸಿದೆ.
