KARNATAKA
ನವಿಲು ಗರಿ ಇಟ್ಟುಕೊಂಡಿರುವ ದರ್ಗಾ, ಮಸೀದಿ ಮೇಲೂ ದಾಳಿ ಮಾಡಿ : ಶಾಸಕ ಅರವಿಂದ ಬೆಲ್ಲದ್
ಬಿಜೆಪಿ ಶಾಸಕ ಅರವಿಂದ ಬೆಲ್ಲದ ನವಿಲುಗರಿ ಬಳಸುವ ಮಸೀದಿ, ದರ್ಗಾಗಳ ಮೇಲೆ ದಾಳಿ ಮಾಡಿ ಮೌಲ್ವಿಗಳ ವಿರುದ್ಧವೂ ದೂರು ದಾಖಲಿಸಿ 7 ವರ್ಷ ಜೈಲಿನಲ್ಲಿಡಿ ಎಂದು ಆಗ್ರಹಿಸಿದ್ದಾರೆ.
ಮಂಗಳೂರು : ಜನಸಾಮಾನ್ಯನಿಂದ ಹಿಡಿದು,ಸೆಲೆಬ್ರೆಟಿ, ರಾಜಕರಣಿಗಳನ್ನು ಪರಚುತ್ತಿರುವ ಹುಲಿಯುಗುರು ಸದ್ಯಕ್ಕೆ ನಿಲ್ಲಿಸುವ ಲಕ್ಷಣ ಕಾಣಿಸ್ತಿಲ್ಲ, ಇದೀಗ ಈ ಹುಲಿಯುಗುರಿನ ಜೊತೆ ನವಿಲು ಗರಿಗಳು ಸೇರಿಕೊಂಡಿದ್ದು ಇದೀಗ ನಿಧಾನಕ್ಕೆ ಧರ್ಮದ ಬಣ್ಣ ಬಳಿಯುವ ಕೆಲಸ ಆರಂಭವಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯುಗುರು ಧರಿಸಿದ ಫೋಟೊ ಕಂಡಲೆಲ್ಲ ದಾಳಿ ಮಾಡಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸರಕಾರಕ್ಕೆ ಹುಲಿಯ ಮೇಲೆ ಮಾತ್ರ ಏಕೆ ವಿಪರೀತ ಕಾಳಜಿ. ನಿತ್ಯ ಸಾವಿರಾರು ಗೋವುಗಳನ್ನು ಕದ್ದು, ಅಕ್ರಮವಾಗಿ ಸಾಗಿಸಿ ವಧಿಸಿ ತಿನ್ನುವುದು ಕೂಡ ಪ್ರಾಣಿ ದೌರ್ಜನ್ಯವಲ್ಲವೆ? ಅವರ ವಿರುದ್ಧ ಕ್ರಮ ಯಾವಾಗ? ಹುಲಿಯ ಪ್ರಾಣಕ್ಕಿರುವ ಮಹತ್ವ ಬಡಪಾಯಿ ಗೋವುಗಳ ಪ್ರಾಣಕ್ಕಿಲ್ಲವೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಲು ಆರಂಭಿಸಿದ್ದಾರೆ. ಹುಲಿಯುಗುರು ಧರಿಸುವುದು ಅಪರಾಧವಾದರೆ ಉಳಿದ ಪ್ರಾಣಿಗಳ ಅಂಗಾಂಗಗಳನ್ನು ಬಳಸುವುದು ಕೂಡ ಅಪರಾಧವಲ್ಲವೇ ಎಂಬ ಮತ್ತೊಂದು ತರ್ಕ ಹುಟ್ಟಿಕೊಂಡಿದೆ. ದರ್ಗಾಗಳಲ್ಲಿ ಮೌಲ್ವಿಗಳು ನವಿಲು ಗರಿಗಳ ಗುಚ್ಚವನ್ನು ತಲೆಯ ಮೇಲಿಟ್ಟು ಆಶೀರ್ವಾದ ಮಾಡುತ್ತಿದ್ದು ನವಿಲುಗಳ ಪುಕ್ಕ ಕೀಳುವುದು ಹೀಂಸೆಯಲ್ಲವೇ? ಅರಣ್ಯ ಕಾಯಿದೆ ನವಿಲುಗಳಿಗೆ ಅನ್ವಯವಾಗುವುದಿಲ್ಲವೇ ಎಂಬ ಚರ್ಚೆ ಕೂಡ ಪ್ರಾರಂಭವಾಗಿದೆ.
ಈ ಕುರಿತು ಮಾತನಾಡಿರುವ ಬಿಜೆಪಿ ಶಾಸಕ ಅರವಿಂದ ಬೆಲ್ಲದ ನವಿಲುಗರಿ ಬಳಸುವ ಮಸೀದಿ, ದರ್ಗಾಗಳ ಮೇಲೆ ದಾಳಿ ಮಾಡಿ ಮೌಲ್ವಿಗಳ ವಿರುದ್ಧವೂ ದೂರು ದಾಖಲಿಸಿ 7 ವರ್ಷ ಜೈಲಿನಲ್ಲಿಡಿ ಎಂದು ಆಗ್ರಹಿಸಿದ್ದಾರೆ. ವನ್ಯಜೀವಿ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ನಿರ್ದಿಷ್ಟ ಧರ್ಮವನ್ನು ಮಾತ್ರ ಗುರಿಯಾಗಿಸುತ್ತಿದೆ, ನವಿಲು ಗರಿಗಳನ್ನು ಇಟ್ಟುಕೊಂಡಿರುವ ಮೌಲ್ವಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರ ಕೇವಲ ಹಿಂದೂಗಳನ್ನು ಗುರಿಯಾಗಿಸುತ್ತಿದೆ. ಮುಸ್ಲಿಂ ಸಮುದಾಯದವರು ದರ್ಗಾಗಳಲ್ಲಿ ನವಿಲು ಗರಿಗಳನ್ನು ಬಳಸುತ್ತಾರೆ, ಇದು ಕಾನೂನು ಉಲ್ಲಂಘನೆಯಲ್ಲವೇ? ಕಾನೂನು ಎಲ್ಲರಿಗೂ ಸಮಾನವಾಗಿದ್ದರೆ ಒಂದು ಸಮುದಾಯವನ್ನಷ್ಟೇ ಏಕೆ ಗುರಿ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.