Connect with us

    KARNATAKA

    ಬೈಕ್ ವ್ಹೀಲಿಂಗ್ ಪ್ರಶ್ನಿಸಿದ್ದಕ್ಕೆ ಪೊಲೀಸರ ಮೇಲೆ ಹಲ್ಲೆ – ಆರೋಪಿಗಳ ಅರೆಸ್ಟ್

    ಕೊಪ್ಪಳ: ಬೈಕ್ ವ್ಹೀಲಿಂಗ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮೂವರು ಬೈಕ್ ಸವಾರರು ಪೊಲೀಸರ ಮೇಲೆ ನಡು ರಸ್ತೆಯಲ್ಲೇ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ದಾಸನಾಳ ಗ್ರಾಮದ ತುಂಗಭದ್ರಾ ಕಾಲುವೆ ಸೇತುವೆಯ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ನಡೆದಿದೆ.

    ಬಂಧಿತ ಆರೋಪಿಗಳನ್ನು ಗಂಗಾವತಿ ನಗರದ ನಿವಾಸಿಗಳಾದ ಅರ್ಭಾಜ್, ಪಂಪನಗೌಡ, ವೆಂಕಟೇಶ ಎಂದು ಗುರುತಿಸಲಾಗಿದ್ದು, ಗಂಗಾವತಿ ಗ್ರಾಮೀಣ ಪೊಲೀಸ್ ಮುಖ್ಯಪೇದೆ ಬಸವರಾಜ, ಚಾಲಕ ಕನಕಪ್ಪ ಅವರ ಮೇಲೆ ಹಲ್ಲೆ ನಡೆದಿದೆ.

    ಗಂಗಾವತಿ ತಾಲೂಕಿನ ಹೇಮಗುಡ್ಡದ ದುರ್ಗಾದೇವಿ ದಸರಾ ಮಹೋತ್ಸದ ಪಾರ್ಕಿಂಗ್ ವ್ಯವಸ್ಥೆ ನೋಡಿಕೊಂಡು, ಪೊಲೀಸರು ಗಂಗಾವತಿ ಕಡೆಗೆ ಬರುತ್ತಿದ್ದರು. ಇದನ್ನು ನೋಡಿದ ಆರೋಪಿಗಳು ಆರ್‌ಎಕ್ಸ್ ಬೈಕ್‌ನ್ನು ವ್ಹೀಲಿಂಗ್ ಮಾಡಿಕೊಂಡು ಪೊಲೀಸರ ವಾಹನದ ಬಲ ಭಾಗದಿಂದ ಓವರ್ ಟೇಕ್ ಮಾಡಿದ್ದಾರೆ. ಇದನ್ನು ಕಂಡ ಪೊಲೀಸರು ನಿಲ್ಲುವಂತೆ ಹೇಳಿದ್ದು, ಅಷ್ಟರಲ್ಲೇ ಆಯತಪ್ಪಿ ಬೈಕ್ ಕೆಳಗೆ ಬಿದ್ದಿದೆ. ಕೂಡಲೇ ತಮ್ಮ ವಾಹನದಿಂದ ಕೆಳಗಿಳಿದು ಬಂದಿರುವ ಪೊಲೀಸರು ಆರೋಪಿಗಳಿಗೆ ಬೈಕ್ ಸೈಡ್‌ಗೆ ಹಾಕುವಂತೆ ಸೂಚಿಸಿದ್ದು, ತಾವೇ ಬೈಕ್ ಎತ್ತಿಕೊಳ್ಳಲು ಮುಂದಾಗಿದ್ದಾರೆ.

    ಇದರಿಂದ ಆಕ್ರೋಶಗೊಂಡ ಅರ್ಭಾಜ್, ಪಂಪನಗೌಡ ಮತ್ತು ವೆಂಕಟೇಶ ಏಕಾಏಕಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಘಟನೆಯನ್ನು ವಿಡಿಯೋ ಮಾಡಲು ಮುಂದಾದ ಮುಖ್ಯಪೇದೆ ಬಸವರಾಜನ ಮೊಬೈಲ್ ಕಿತ್ತುಕೊಂಡು ಕಾಲುವೆಗೆ ಎಸೆದಿದ್ದಾರೆ. ಬಳಿಕ ದುಷ್ಕರ್ಮಿಗಳು ಅವರ ಮೇಲೆಯೂ ಹಲ್ಲೆ ಮಾಡಿದ್ದಾರೆ.

    ಮೂವರು ದುಷ್ಕರ್ಮಿಗಳು ಸೇರಿಕೊಂಡು ಇಬ್ಬರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಕೂಡಲೇ ಮತ್ತಷ್ಟು ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿಕೊಂಡು, ಆರೋಪಿಗಳನ್ನು ಬೈಕ್ ಸಮೇತ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಹಲ್ಲೆಗೆ ಒಳಗಾದ ಇಬ್ಬರು ಪೊಲೀಸರು ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *