National
ಕ್ವಾರಂಟೈನ್ ಉಲ್ಲಂಘಿಸಿ ಹೈಡ್ರಾಮಾ, ಸಿನಿಮೀಯ ರೀತಿ ಚೇಸ್ ಮಾಡಿ ಬಂಧನ !
ಪತ್ತನಂತಿಟ್ಟ , ಜುಲೈ 7 : ಕೇರಳದಲ್ಲಿ ಕೊರೊನಾ ವಿಚಾರದಲ್ಲಿ ಆರೋಗ್ಯ ಕಾರ್ಯಕರ್ತರು ಯಾವ ರೀತಿ ಕೆಲಸ ಮಾಡುತ್ತಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಸೌದಿ ಅರೇಬಿಯಾದಿಂದ ಬಂದಿದ್ದ ವ್ಯಕ್ತಿಯೊಬ್ಬ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗೆ ಓಡಾಡುತ್ತಿದ್ದಾಗ ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಹಿಡಿದುಹಾಕಿದ್ದಾರೆ.
ಈ ಘಟನೆ ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ನಡೆದಿದ್ದು ಕಾರ್ಯಕರ್ತರು ಮತ್ತು ಪೊಲೀಸರು ಹರಸಾಹಸದಿಂದ ಆತನನ್ನು ಬೆನ್ನಟ್ಟಿ ಹಿಡಿಯುವ ವಿಡಿಯೋ ಭಾರೀ ವೈರಲ್ ಆಗಿದೆ. ಜುಲೈ 3ರಂದು ಸೌದಿಯಿಂದ ಆಗಮಿಸಿದ್ದ 47 ವರ್ಷದ ವ್ಯಕ್ತಿಯನ್ನು ಹೋಮ್ ಕ್ವಾರಂಟೈನ್ ಆಗಲು ಸೂಚಿಸಲಾಗಿತ್ತು. ಆದರೆ ಮನೆಯಲ್ಲಿ ಪತ್ನಿ ಜೊತೆ ಜಗಳವಾಡಿ ಸ್ಕೂಟರಿನಲ್ಲಿ ಪತ್ತನಂತಿಟ್ಟ ನಗರದ ಸೈಂಟ್ ಪೀಟರ್ ಜಂಕ್ಷನ್ನಿಗೆ ಬಂದಿದ್ದ. ವ್ಯಕ್ತಿ ಮಾಸ್ಕ್ ಧರಿಸದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಿಸಿದಾಗ, ಆತ ವಿದೇಶದಿಂದ ಬಂದಿರುವುದು ಗೊತ್ತಾಗಿದೆ.
ಬಳಿಕ ಪೊಲೀಸರ ಸೂಚನೆಯಂತೆ ಆರೋಗ್ಯ ಕಾರ್ಯಕರ್ತರು ಪಿಪಿಇ ಕಿಟ್ ಧರಿಸಿಕೊಂಡು ಸ್ಥಳಕ್ಕೆ ಆಗಮಿಸಿದ್ದು ಹೊರಗೆ ಓಡಾಡದಂತೆ ಸೂಚನೆ ನೀಡಿದ್ದಾರೆ. ಆದರೆ, ವ್ಯಕ್ತಿ ಅಲ್ಲಿಂದ ಓಡಿ ತಪ್ಪಿಸಲು ಯತ್ನಿಸಿದ್ದು ಪೊಲೀಸರು ಮತ್ತು ಕಾರ್ಯಕರ್ತರು ಬೆನ್ನಟ್ಟಿದ್ದಾರೆ. ಇದರಿಂದಾಗಿ ಇಡೀ ಜಂಕ್ಷನ್ ಬ್ಲಾಕ್ ಆಗಿದ್ದು ಅರ್ಧ ಗಂಟೆ ಕಾಲ ಹೈಡ್ರಾಮಾವೇ ನಡೆದುಹೋಗಿದೆ.
ಕೊನೆಗೆ, ಪೊಲೀಸರು ಆತನನ್ನು ಹಿಡಿದಿದ್ದು ಆರೋಗ್ಯ ಕಾರ್ಯಕರ್ತರು ರಸ್ತೆ ಮಧ್ಯದಲ್ಲೇ ವ್ಯಕ್ತಿಯನ್ನು ಬ್ಯಾಂಡೇಜಿನಿಂದ ಸುತ್ತಿ ಸ್ಟ್ರಚರ್ ನಲ್ಲಿ ಹಾಕಿ ಬಂಧಿಸಿದ್ದಾರೆ. ಸಾರ್ವಜನಿಕರು ನೋಡ ನೋಡುತ್ತಿದ್ದಂತೆ ಯಾವುದೋ ಅಪರಾಧಿಯನ್ನು ಬಂಧಿಸುವ ರೀತಿ ಪೊಲೀಸರು ಮತ್ತು ಆರೋಗ್ಯ ಕಾರ್ಯಕರ್ತರು ಹರಸಾಹಸದಿಂದ ಹಿಡಿದು ಬಂಧಿಸಿದ್ದಾರೆ.