Connect with us

DAKSHINA KANNADA

ಕೋವಿಡ್ ಸವಾಲಿನ ನಡುವೆ ಪುತ್ತೂರು ಎಪಿಎಂಸಿಯ ಅಸಾಮಾನ್ಯ ಸಾಧನೆ-ಸಚಿವ ಡಿ.ವಿ ಸದಾನಂದ ಗೌಡ

ಕೋವಿಡ್ ಸವಾಲಿನ ನಡುವೆ ಪುತ್ತೂರು ಎಪಿಎಂಸಿಯ ಅಸಾಮಾನ್ಯ ಸಾಧನೆ-ಸಚಿವ ಡಿ.ವಿ ಸದಾನಂದ ಗೌಡ

ಪುತ್ತೂರು ಅಕ್ಟೋಬರ್ 3: ಕೋವಿಡ್ ಸವಾಲಿನ ನಡುವೆ ಸುಮಾರು ರೂ. 7 ಕೋಟಿಗೂ ಅಧಿಕ ವೆಚ್ಚದ ವಿವಿಧ ಕಾಮಗಾರಿಗಳನ್ನು ನಿರ್ವಹಿಸಿರುವ ಪುತ್ತೂರು ಎಪಿಎಂಸಿಯು ಅಸಾಧ್ಯವನ್ನು ಸಾಧಿಸಿ ತೋರಿಸಿದೆ. ಕೋವಿಡ್ ಬಳಿಕ ತಾನು ಪ್ರಥಮ ಬಾರಿಗೆ ಇಷ್ಟೊಂದು ಭ್ರಹತ್ ಮೊತ್ತದ ಕಾಮಗಾರಿಯನ್ನು ಉದ್ಘಾಟಿಸಿದ್ದೇನೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ಅವರು ಪುತ್ತೂರು ಕೃಷಿ ಉತ್ಪನ್ನ ಮಾರಾಟ ಸಮಿತಿ(ಎಪಿಎಂಸಿ)ಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಶನಿವಾರ ನಡೆದ ರೂ. 7.56 ಕೋಟಿಯ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ರೂ. 2.18 ಕೋಟಿಯ ನೂತನ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ನವೀಕೃತ ತರಕಾರಿ ಮಾರುಕಟ್ಟೆಯನ್ನು ಉದ್ಘಾಟಿಸಿ ಮಾತನಾಡಿದರು.
ಇಲ್ಲಿನ ಎಪಿಎಂಸಿ, ಆಡಳಿತ ಪಕ್ಷ, ವಿರೋಧ ಪಕ್ಷ ಇವೆಲ್ಲದರ ಉದ್ದೇಶವೂ ಈ ದೇಶದ ಅನ್ನದಾತನ ಪರವಾಗಿರಬೇಕು. ಆದರೆ ಕಾಂಗ್ರೆಸ್ ಪಕ್ಷವು ಸರ್ಕಾರ ಜಾರಿಗೊಳಿಸಿದ ಕೃಷಿ ಮಸೂದೆ ತಿದ್ದುಪಡಿಯನ್ನು ವಿರೋಧಿಸಿ ಬೀದಿ ನಾಟಕ ನಡೆಸುತ್ತಿದೆ.

ಈ ಕಾಯಿದೆಯಿಂದ ರೈತರಿಗೆ ತೆರೆದ ಮಾರುಕಟ್ಟೆ ದೊರೆಯಲಿದೆ. ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಇಷ್ಟು ವರ್ಷಗಳಾದರೂ ರೈತರಿಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ರೈತ ತನ್ನ ಭೂಮಿ, ತನ್ನ ಬಂಡವಾಳ ಮತ್ತು ತನ್ನ ಶ್ರಮದಾನದ ಮೂಲಕ ಬೆಳೆದ ಬೆಳೆಗಳಿಗೆ ತನಗಿಷ್ಟ ಬಂದಂತೆ ಮಾರಾಟ ಮಾಡಲು ಹಕ್ಕು ಇರಲಿಲ್ಲ. ಇದೀಗ ಕಾಯ್ದೆಯ ತಿದ್ದುಪಡಿಯ ಮೂಲಕ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಂತಹ ಅವಕಾಶ ರೈತರಿಗೆ ಒದಗಿಸಿದೆ. ರೈತರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದಂತಾಗಿದೆ. ರೈತರ ಆದಾಯ ದ್ವಿಗುಣಗೊಳಿಸಲು ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಿದೆ. ಸರ್ಕಾರವು ಉತ್ಪಾಧನಾ ವೆಚ್ಚಕ್ಕಿಂತ ದುಪ್ಪಟ್ಟು ದರವನ್ನು ನೀಡಿ ರೈತರಿಗೆ ಪ್ರಧಾನಿ ಮೋದಿ ಚೈತನ್ಯ ನೀಡಿದ್ದಾರೆ. ಆದರೆ ಇದನ್ನು ಮರೆಮಾಚಿ ವಿಪಕ್ಷಗಳು ರೈತರ ದಾರಿತಪ್ಪಿಸುವುದು ಸರಿಯಲ್ಲ. ಕೃಷಿ ಮಸೂದೆಯ ಬಗ್ಗೆ ರೈತರ ಮನೆ ಮನೆಗೆ ಭೇಟಿ ನೀಡಿ ಕಾನೂನಿನ ಅರಿವು ಮೂಡಿಸಲಾಗುವುದು ಎಂದರು.

ಹಿಂದೆ ನಾವು ಗೋದಿ ಸೇರಿದಂತೆ ವಿವಿಧ ಆಹಾರಗಳನ್ನು ಆಮದು ಮಾಡಿಕೊಳ್ಳುವ ಸ್ಥಿತಿಯಿತ್ತು. ಆದರೆ ಇದೀಗ ಆಹಾರ ಉತ್ಪಾಧನೆಯಲ್ಲಿ ದೇಶ 2ನೇ ಸ್ಥಾನದಲ್ಲಿದೆ ಹಾಗೂ 60 ದೇಶಗಳಿಗೆ ರಫ್ತು ಮಾಡುವ ಹಂತಕ್ಕೆ ಬೆಳೆದಿದೆ. ತಿದ್ದುಪಡಿಯಾದ ಕೃಷಿ ಕಾಯ್ದೆಯಿಂದ ರೈತರಿಗೆ ಮಾರುಕಟ್ಟೆಯ ಏರಿಳಿತ ಕಡಿಮೆಯಾಗಲಿದೆ ಅಲ್ಲದೆ ಸ್ಪರ್ಧೆಗಳು ಹೆಚ್ಚಾಗಲಿದ್ದು, ರೈತರಿಗೆ ಆಯ್ಕೆಯ ಸ್ವಾತಂತ್ರ್ಯ ಸಿಗಲಿದೆ ಎಂದರು.
ಪುತ್ತೂರು ಎಪಿಎಂಸಿ ಮುಖ್ಯ ಪ್ರಾಂಗಣದಲ್ಲಿ 1ಸಾವಿರ ಮೆಟ್ರಿಕ್‍ಟನ್ ಸಾಮಥ್ರ್ಯದ ಗೋದಾಮು ಉದ್ಘಾಟಿಸಿದ ರಾಜ್ಯ ಸಹಕಾರಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ. ಸೋಮಶೇಖರ್, 2018ರ ವಿಧಾನಸಭಾ ಚುನಾವಣೆಯ ಸಂದರ್ಭ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರಿಗೆ ಉಂಟಾಗುತ್ತಿರುವ ಶೋಷಣೆ ತಡೆಯುವುದಾಗಿ ಹೇಳಿತ್ತು. ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಈ ಕೆಲಸವನ್ನು ಮಾಡದ ಕಾಂಗ್ರೆಸ್ ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಾಗ ಟೀಕಿಸುತ್ತಿದೆ. ಕಾಂಗ್ರೆಸ್ ಮಾಡದ ಕೆಲಸವನ್ನು ಬಿಜೆಪಿ ಸರಕಾರ ಮಾಡಿದೆ ಎಂದರು.
ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ನವೀಕೃತ ಹೂದೋಟವನ್ನು ಸುಳ್ಯ ಶಾಸಕ ಎಸ್. ಅಂಗಾರ ಉದ್ಘಾಟಿಸಿದರು. ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್, ಕಡಬ ತಾಲೂಕು ಪಂಚಾಯತ್ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಪುತ್ತೂರು ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಎಪಿಎಂಸಿ ಆಡಳಿತ ಮಂಡಳಿ ನಿರ್ದೇಶಕರು ಉಪಸ್ಥಿತರಿದ್ದರು.
ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಸ್ವಾಗತಿಸಿದರು. ಉಪಾಧ್ಯಕ್ಷ ಮಂಜುನಾಥ್ ಎನ್.ಎಸ್. ವಂದಿಸಿದರು. ರಾಕೇಶ್ ರೈ ಕಡೆಂಜಿ ಕಾರ್ಯಕ್ರಮ ನಿರೂಪಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *