DAKSHINA KANNADA
ಪುತ್ತೂರಿನ ಯುವತಿ ಗೌರಿ ಕೊಲೆ ಕೃತ್ಯದ ಸತ್ಯ ಬಿಚ್ಚಿಟ್ಟ ದ.ಕ. ಎಸ್ಪಿ ರಿಷ್ಯಂತ್..!

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಗುರುವಾರ ನಡೆದ ಗೌರಿ ಕೊಲೆ ಪ್ರಕರಣದ ತನಿಖೆಯನ್ನು ಪುತ್ತೂರು ಪೊಲೀಸರು ನಡೆಸುತ್ತಿದ್ದು ಕೊಲೆಗಾರ ಗೌರಿಯ ಪ್ರಿಯಕರನಾಗಿದ್ದ ಪದ್ಮರಾಜ್ ಈಗಾಗಲೇ ಪೊಲೀಸ್ ವಶದಲ್ಲಿದ್ದಾನೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಗುರುವಾರ ನಡೆದ ಗೌರಿ ಕೊಲೆ ಪ್ರಕರಣದ ತನಿಖೆಯನ್ನು ಪುತ್ತೂರು ಪೊಲೀಸರು ನಡೆಸುತ್ತಿದ್ದು ಕೊಲೆಗಾರ ಗೌರಿಯ ಪ್ರಿಯಕರನಾಗಿದ್ದ ಪದ್ಮರಾಜ್ ಈಗಾಗಲೇ ಪೊಲೀಸ್ ವಶದಲ್ಲಿದ್ದಾನೆ.

ಈ ಕೊಲೆಯ ಹಿಂದಿನ ವೃತಾಂತವನ್ನು ಜಿಲ್ಲಾ ಎಸ್‌ಪಿ ರಿಷ್ಯಂತ್ ಎಳೆಎಳೆಯಾಗಿ ಮಾದ್ಯಮಗಳ ಮುಂದೆ ಇಟ್ಟಿದ್ದಾರೆ.
ಕೊಲೆಯಾದ ಗೌರಿ ಮತ್ತು ಕೊಲೆಗಾರ ಯುವಕ ಪದ್ಮರಾಜ್ ಕಳೆದ 6 ವರ್ಷಗಳಿಂದ ಪರಿಚಿತರಾಗಿದ್ದರು.
ಗೌರಿ ಬಂಟ್ವಾಳ ತಾಲೂಕಿನ ವಿಟ್ಲದ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿಯೇ ಪದ್ಮರಾಜನ ಪರಿಚಯವಾಗಿತ್ತು.
ದಿನಾ ಮಾತಾನಾಡುವ ಹಂತದಲ್ಲಿದ್ದ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿತ್ತು.
ಈ 6 ವರ್ಷಗಳ ಅವಧಿಯಲ್ಲಿ ಮಧ್ಯದಲ್ಲೊಮ್ಮೆ ಅವರೊಳಗೆ ಭಿನ್ನಾಭಿಪ್ರಾಯ ಹುಟ್ಟಿಕೊಂಡಿತ್ತು.
2020 ರಲ್ಲಿ ಗೌರಿ ಇದೇ ಪದ್ಮರಾಜನ ವಿರುದ್ದ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ಈ ಸಂದರ್ಭದಲ್ಲಿ ಪೊಲೀಸರು ಇಬ್ಭರನ್ನೂ ಠಾಣೆಗೆ ಕರೆಸಿ ಇನ್ನುಮುಂದೆ ಪರಸ್ಪರ ಮಾತುಕತೆ ಇಲ್ಲ ಎಂಬುದಾಗಿ ಮುಚ್ಚಳಿಕೆ ಬರೆಸಿ ಕಳುಹಿಸಿದ್ದರು.
ಆದರೆ ಆ ಬಳಿಕವೂ ಇಬ್ಬರ ನಡುವೆ ಮಾತುಕತೆ ಮುಂದುವರಿದಿತ್ತು.
ಈ ಮಧ್ಯೆ ಪದ್ಮರಾಜ್ ಗೌರಿಗೆ ಮೊಬೈಲ್ ಪೋನ್ ಒಂದನ್ನು ಕೊಡಿಸಿದ್ದನು.
ಆದರೆ ಮತ್ತೆ ಇತ್ತೀಚೆಗೆ ಅವರೊಳಗೆ ಮತ್ತೆ ಭಿನ್ನಾಭಿಪ್ರಾಯ ಬಂದು ಆತನ ಪ್ರೀತಿಯನ್ನು ಗೌರಿ ನಿರಾಕರಿಸಿದ್ದಳು.
ಈ ಹಿನ್ನೆಲೆಯಲ್ಲಿ ಗುರುವಾರ ಆತ ಬೈಕಿನಲ್ಲಿ ಗೌರಿ ಕೆಲಸ ಮಾಡುತ್ತಿದ್ದ ಪುತ್ತೂರಿನ ಫ್ಯಾನ್ಸಿ ಅಂಗಡಿಗೆ ತೆರಳಿ ಈ ಹಿಂದೆ ಗಿಫ್ಟ್ ಕೊಟ್ಟಿದ್ದ ಮೊಬೈಲನ್ನು ಆಕೆಯ ಬ್ಯಾಗಿನಿಂದ ಕಿತ್ತುಕೊಂಡು ಹೋಗಿದ್ದನು.
ಬಳಿಕ ಆಕೆ ಪೋನ್ ಕರೆ ಮಾಡಿ ತನ್ನ ಮೊಬೈಲ್ ಫೋನ್ ಹಿಂತಿರುಗಿಸುವಂತೆ ಒತ್ತಾಯಿಸಿದ್ದಳು.
ಆತ ವಾಪಸ್ ಬರಲು ಒಪ್ಪಿದ್ದರಿಂದ ಗೌರಿ ಮಹಿಳಾ ಪೊಲೀಸ್ ಠಾಣೆ ಬಳಿ ತೆರಳಿ ಆತನಿಗಾಗಿ ಕಾಯುತ್ತಿದ್ದಳು.
ಬೈಕಲ್ಲಿ ಬಂದ ಪದ್ಮರಾಜ್ ಮತ್ತೆ ಗೌರಿ ಮಧ್ಯೆ ವಾಗ್ವಾದ ನಡೆದಿದೆ ಹಾಗೂ ಈ ಸಂದರ್ಭ ಪದ್ಮರಾಜ್ ಚೂರಿಯಿಂದ ಗೌರಿಯ ಕುತ್ತಿಗೆಗೆ ಇರಿದಿದ್ದಾನೆ.
ಈ ಸಂದರ್ಭ ಗೌರಿ ನೆಲಕ್ಕೆ ಕುಸಿದು ಬಿದ್ದು ಒದ್ದಾಡುತ್ತಿದ್ದಾಗ ಮತ್ತೆ ನಾಲ್ಕೈದು ಬಾರಿ ಕತ್ತನ್ನು ಸೀಳಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಮೊದಲು ಫ್ಯಾನ್ಸಿ ಅಂಗಡಿಯಲ್ಲಿ ಆತ ಆಕೆಯ ಜತೆ ಜಗಳ ಮಾಡಿರುವ ಕುರಿತಂತೆ ಸಿಸಿ ಕ್ಯಾಮರಾ ದೃಶ್ಯಾವಳಿ ಇದೀಗ ಪತ್ತೆಯಾಗಿದ್ದು ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ.
ಸ್ಥಳದಿಂದ ಪರಾರಿಯಾಗಿದ್ದ ಪದ್ಮರಾಜನನ್ನು ಎರಡೇ ಗಂಟೆಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದು ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಹೇಳಿದರು.