DAKSHINA KANNADA
ಹುತ್ತಕ್ಕೆ ಪೂಜೆ ಸಲ್ಲಿಸುವ ಅಪರೂಪದ ಕ್ಷೇತ್ರ..ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ

ಪುತ್ತೂರು ಫೆಬ್ರವರಿ 18: ಪುತ್ತೂರಿನ ಈ ಕ್ಷೇತ್ರದಲ್ಲಿರುವ ಗರ್ಭಗುಡಿಯಲ್ಲಿ ದೇವರ ಮೂರ್ತಿಯಿಲ್ಲ. ಆದರೆ ಪ್ರತಿನಿತ್ಯ ಎರಡು ಬಾರಿ ಈ ದೇವಸ್ಥಾನದಲ್ಲಿ ಪೂಜೆ ನಡೆಯುತ್ತದೆ. ಹೌದು ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ರೀತಿಯ ವಿಶೇಷವೊಂದಿದೆ. ಈ ಕ್ಷೇತ್ರದ ಗರ್ಭಗುಡಿಯಲ್ಲಿ ಹುತ್ತವೊಂದಿದ್ದು, ಈ ಹುತ್ತಕ್ಕೆ ಇಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಹುತ್ತದ ಜೊತೆಗೆ ಸುಬ್ರಹ್ಮಣ್ಯ ಸ್ವಾಮಿಯ ಉತ್ಸವ ಮೂರ್ತಿಯೂ ಇದೆ.
ಕೃಷಿತೋಟ ಹಾಗು ದಟ್ಟ ಕಾಡಿನ ಮಧ್ಯೆ ಇರುವಂತಹ ಈ ಕ್ಷೇತ್ರಕ್ಕೆ ಸಾವಿರ ವರ್ಷದ ಇತಿಹಾಸವಿದೆ. ಹಿಂದೆ ಖುಷಿ ಮುನಿಗಳು ಈ ಕ್ಷೇತ್ರದಲ್ಲಿ ಗುಹೆಯೊಳಗೆ ಕುಳಿತು ತಪಸ್ಸು ಮತ್ತು ಪೂಜೆ ನೆರವೇರಿಸುತ್ತಿದ್ದರು ಎನ್ನುವ ಕಥೆ ಇಲ್ಲಿದೆ. ಆ ಬಳಿಕ ಈ ಹುತ್ತಕ್ಕೆ ಮುಳಿ ಹುಲ್ಲಿನ ಚಪ್ಪರ ಹಾಕಿ ಪೂಜಿಸಲಾಗುತ್ತಿತ್ತಂತೆ. ಬಳಿಕದ ದಿನಗಳಲ್ಲಿ ಇಲ್ಲಿನ ಪಾಲ್ತಾಡು ಮನೆತನಕ್ಕೆ ಸೇರಿದ ಸಂಕಪ್ಪ ರೈ ಎನ್ನುವವರು ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಮಾಡುತ್ತಾರೆ. ಹುತ್ತವಿರುವ ಜಾಗಕ್ಕೆ ಹೆಂಚಿನ ಮಾಡು ಮಾಡಿ,ಬಳಿಕದ ದಿನಗಳಲ್ಲಿ ದೇವಸ್ಥಾನದ ರೂಪಕ್ಕೆ ಈ ಕ್ಷೇತ್ರ ಬದಲಾಗುತ್ತದೆ.

1997 ರಲ್ಲಿ ಕ್ಷೇತ್ರದ ಬಗ್ಗೆ ಪಾಲ್ತಾಡು ಮನೆತನದವರು ಮತ್ತು ಸಾರ್ವಜನಿಕರು ಸೇರಿ ದೈವಜ್ಞರಲ್ಲಿ ಪ್ರಶ್ನೆ ಚಿಂತನೆ ಮಾಡಿದ ಸಂದರ್ಭದಲ್ಲಿ ಹುತ್ತದ ಒಳಗಡೆ ಸುಬ್ರಹ್ಮಣ್ಯ ಸ್ವಾಮಿಯ ವಿಗ್ರಹ ಇರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಅಲ್ಲದೆ ಸುಬ್ರಹ್ಮಣ್ಯ ಸ್ವಾಮಿಯನ್ನು ಹುತ್ತದೊಳಗಿನ ನಾಗರಾಜ ಕಾಯುತ್ತಿದ್ದಾನೆ ಎನ್ನುವ ವಿಚಾರವೂ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಿತ್ತು. ಇದಕ್ಕೆ ಪೂರಕವೆಂಬಂತೆ ಜೀವಂತ ನಾಗ ಹಲವು ಬಾರಿ ಗರ್ಭಗುಡಿಯಲ್ಲಿರುವ ಹುತ್ತದಲ್ಲಿರುವುದನ್ನು ಕ್ಷೇತ್ರದ ಅರ್ಚಕರು ಮತ್ತು ಸಾರ್ವಜನಿಕರು ಹಲವು ಬಾರಿ ಕಂಡಿದ್ದಾರೆ.
ಫೆಬ್ರವರಿ 17 ರಿಂದ 24 ರ ವರೆಗೆ ಈ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲೂ ನಾಗರಹಾವು ಕ್ಷೇತ್ರದ ಸುತ್ತ ಓಡಾಡಿ ಕ್ಷೇತ್ರದ ಭಕ್ತರಿಗೆ ದರ್ಶನವನ್ನು ನೀಡಿತ್ತು. ಕುಟುಂಬದಲ್ಲಿ ಉಂಟಾಗುವ ಕಲಹ, ನಾಗದೋಷ ನಿವಾರಣೆ, ಕೃಷಿತೋಟಕ್ಕೆ ಕಾಡುವ ನೀರಿನ ಸಮಸ್ಯೆ ಹೀಗೆ ಎಲ್ಲಾ ರೀತಿಯ ಸಮಸ್ಯೆಗಳಿಗೆ ಕ್ಷೇತ್ರದಲ್ಲಿ ಪರಿಹಾರ ದೊರೆಯುತ್ತದೆ. ಇದೇ ಕಾರಣಕ್ಕಾಗಿ ಕುಗ್ರಾಮದಲ್ಲಿರುವ ಈ ಕ್ಷೇತ್ರಕ್ಕೆ ಊರ ಹಾಗು ಪರವೂರಿನಿಂದ ಅಪಾರ ಸಂಖ್ಯೆಯ ಭಕ್ತಾಧಿಗಳು ತಮ್ಮ ಅಭೀಷ್ಟ ನೆರವೇರಿಸುತ್ತಾರೆ ಎನ್ನುತ್ತಾರೆ ಕ್ಷೇತ್ರದ ಅನುವಂಶಿಕ ಮುಕ್ತೇಸ್ತರರಾದ ಸಂತೋಷ್ ಕುಮಾರ್ ರೈ.
Pingback: 2024-02-18: The Mangalore Mirror - ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ