DAKSHINA KANNADA
ಅವೈಜ್ಞಾನಿಕ ಗುಡ್ಡ ಅಗೆತ ಪುತ್ತೂರು ಬೈಪಾಸ್ ಬಳಿ ಹೆದ್ದಾರಿ ತುಂಬೆಲ್ಲಾ ಹರಡಿದ ಕೆಸರು ಮಣ್ಣು – ವಾಹನ ಸ್ಕಿಡ್ ಆದರೆ ಅಪಾಯ ಕಟ್ಟಿಟ್ಟ ಬುತ್ತಿ
ಪುತ್ತೂರು ಜುಲೈ 17: ಅವೈಜ್ಞಾನಿಕ ರೀತಿಯಲ್ಲಿ ಗುಡ್ಡದ ಅಗೆದ ಪರಿಣಾಮ ಗುಡ್ಡದ ಮಣ್ಣು ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿಯುತ್ತಿರುವ ಘಟನೆ ಪುತ್ತೂರಿನ ಬೈಪಾಸ್ ನಲ್ಲಿ ನಡೆದಿದ್ದು, ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪುತ್ತೂರಿನ ಬೈಪಾಸ್ ನಲ್ಲಿ ಸಮೀಪ ಇರುವ ಖಾಸಗಿ ವ್ಯಕ್ತಿಗಳಿಗೆ ಸೇರಿದ ಜಾಗದಲ್ಲಿರುವ ಗುಡ್ಡವನ್ನು ಅವೈಜ್ಞಾನಿಕ ರೀತಿಯಲ್ಲಿ ಅಗೆಯಲಾಗಿದೆ. ಈಗ ಮಳೆ ಹೆಚ್ಚಾದ ಕಾರಣ ಗುಡ್ಡ ಅಗೆದ ಜಾಗದಿಂದ ಮಣ್ಣು ಮಿಶ್ರಿತ ನೀರು ಸೀದಾ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿಯಲಾರಂಭಿಸಲಿದೆ. ಇದರಿಂದಾಗಿ ಈ ಪರಿಸರದಲ್ಲಿ ಓಡಾಡುವ ವಾಹನಗಳಿಗೆ ಸಂಕಷ್ಟ ತಂದಿಟ್ಟಿದೆ.
ಈ ಹೆದ್ದಾರಿಯಲ್ಲಿ ಮಣ್ಣು ಮಿಶ್ರಿತ ನೀರು ಹರಿಯುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರೀತಿಯಾಗಿ ಅವೈಜ್ಞಾನಿಕವಾಗಿ ಗುಡ್ಡ ಅಗೆದವರ ವಿರುದ್ದ ಕ್ರಮಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ. ಸಂಬಂಧಪಟ್ಟ ಇಲಾಖೆ ಕೂಡಲೇ ಕ್ರಮಕೈಗೊಂಡು ಸಂಭಾವ್ಯ ಅಪಾಯ ತಪ್ಪಿಸಬೇಕಾಗಿದೆ.