DAKSHINA KANNADA
ಪೇಟಾದವರು ನಮ್ಮ ಸುದ್ದಿಗೆ ಬರಬೇಡಿ – ನಾವು ಮುಂಬೈ, ಚೆನ್ನೈ, ಶಿವಮೊಗ್ಗದಲ್ಲೂ, ಸಾಧ್ಯವಾದರೆ ದುಬೈನಲ್ಲೂ ಕಂಬಳ ಮಾಡುತ್ತೇವೆ – ಎಂದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು ಮಾರ್ಚ್ 03: ಕಂಬಳದ ಅಭಿಮಾನಿಗಳು ಎಲ್ಲಿ ವರೆಗೆ ಇರುತ್ತಾರೋ ಅಲ್ಲಿ ತನಕ ಕಂಬಳ ನಿಲ್ಲುವುದಿಲ್ಲ. ನಿರಂತರವಾಗಿ ನಡೆಯುತ್ತದೆ. ಪ್ರಾಣಿ ದಯಾ ಸಂಘ (ಪೇಟ)ದವರು ಸುಪ್ರಿಂ ಕೋರ್ಟ್ ಗೂ ಹೋಗಲಿ, ಏನೇ ಕಸರತ್ತು ಮಾಡಿದರೂ ಕಂಬಳವನ್ನು ನಿಲ್ಲಿಸಲು ಸಾಧ್ಯವಿಲ್ಲ. ಅವರು ನಮ್ಮ ಸುದ್ದಿಗೆ ಬರುವುದೂ ಬೇಡ. ನಾವು ಮುಂಬೈ, ಚೆನ್ನೈ, ಶಿವಮೊಗ್ಗದಲ್ಲೂ, ಸಾಧ್ಯವಾದರೆ ದುಬೈನಲ್ಲೂ ಕಂಬಳ ಮಾಡುತ್ತೇವೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಶನಿವಾರ ರಾತ್ರಿ ನಡೆದ ಕೋಟಿ-ಚೆನ್ನಯ ಕಂಬಳದ ಸಮಾರಂಭದಲ್ಲಿ ಮಾತನಾಡಿದರು. ವರ್ಷ ಕಳೆದಂತೆ ಕಂಬಳದ ಅಭಿಮಾನಿಗಳು ಜಾಸ್ತಿಯಾಗುತ್ತಿದ್ದಾರೆ. ಈ ನಡುವೆ ಪೇಟಾದವರು ವ್ಯವಸ್ಥಿತವಾಗಿ ಕಂಬಳದ ವಿರುದ್ಧ ಕಾನೂನು ಹೋರಾಟ ಮಾಡುತ್ತಿದ್ದಾರೆ. ಆದರೆ ನಾನು ಈ ಕುರಿತು ಸುಪ್ರಿಂ ಕೋರ್ಟ್ ಗೆ ಮನವರಿಕೆ ಮಾಡಿದ್ದೇನೆ. ಪ್ರತೀ ಕಂಬಳಕ್ಕೆ ಐದು ಲಕ್ಷ ರೂ. ತೆಗೆಸಿಕೊಟ್ಟಿದ್ದೇನೆ ಎಂದು ತಿಳಿಸಿದ ಅವರು, ತುಳು ಭಾಷೆಗಾಗಿ ಈಗಾಗಲೇ ವಿಧಾನಸಭೆಯಲ್ಲಿ ಹಲವಾರು ಭಾರಿ ಪ್ರಸ್ತಾಪ ಮಾಡಿದ್ದು, ತುಳು ಭಾಷೆಯನ್ನು ಮುಂದೆ ತರುವಲ್ಲಿ ಮುಂದಿನ ಬಾರಿ ಬೆಂಗಳೂರಿನಲ್ಲಿ ತುಳುಭವನ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಜಾನಪದ ವೀರ ಕ್ರೀಡೆ. ವ್ಯವಸಾಯ ಕಡಿಮೆಯಾದ ಸಂದರ್ಭ ರೈತರ ಸ್ವಾಭಿಮಾನದ ಕಂಬಳದ ಕ್ರೀಡೆ ಉಳಿಯಬೇಕು ಎಂಬ ನಿಟ್ಟಿನಲ್ಲಿ ಚಾಲನೆ ನೀಡಲಾಯಿತು. ಇದಕ್ಕೆ ತುಂಬಾ ಶಕ್ತಿ ನೀಡಿದವರು ಎನ್. ಮುತ್ತಪ್ಪ ರೈ. ಕಂಬಳ ಕೇವಲ ಕರಾವಳಿ ಜಿಲ್ಲೆಗೆ ಸೀಮಿತವಾಗಿರದೇ ದೂರದ ಬೆಂಗಳೂರಿನಿಂದ ಚಲನಚಿತ್ರ ನಟ-ನಟಿಯರು ಬಂದು ವೀಕ್ಷಿಸುತ್ತಿರುವುದು ಉತ್ತಮ ಕಂಬಳಕ್ಕೆ ಸಾಕ್ಷಿಯಾಗಿದೆ. ಈ ನಿಟ್ಟಿನಲ್ಲಿ ಪುತ್ತೂರು ಕಂಬಳ ಪ್ರಸಿದ್ಧಿ ಪಡೆದಿದೆ ಎಂದರು. ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಶುಭ ಹಾರೈಸಿದರು.
ಪಾಪ್ಯುಲರ್ ಸ್ಟ್ರೀಟ್ಸ್ನ ಮಾಲಕ ನರಸಿಂಹ ಕಾಮತ್, ರಾಜ್ಯ ಪ್ರಶಸ್ತಿ ವಿಜೇತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ, ಎಡಪದವು ಸ್ವಾಮಿ ವಿವೇಕಾನಂದ ಪ.ಪೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರೇಮನಾಥ ಶೆಟ್ಟಿ ಕಾವು ಅತಿಥಿಗಳಾಗಿ ಭಾಗವಹಿಸಿದ್ದರು. ಕೋಟಿ ಚೆನ್ನಯ ಜೋಡು ಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಕಂಬಳ ಸಮಿತಿ ಸಂಚಾಲಕ ವಸಂತ ಕುಮಾರ್ ರೈ, ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ, ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ, ಉಪಾಧ್ಯಕ್ಷ ಶಿವರಾಮ ಆಳ್ವ, ಸದಸ್ಯ ಯೋಗೀಶ್ ಸಾಮಾನಿ ಸಂಪಿಗೆದಡಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಕಂಬಳ ಸಮಿತಿ ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ಳ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಸಭಾ ಸದಸ್ಯ ಜೀವಂಧರ್ ಜೈನ್, ಸುಳ್ಯ ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಎಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ,. ಕ್ರೀಡಾ ಪಟುಗಳಾದ ಕರುಣಾಕರ ಶೆಟ್ಟಿ, ತಾರಾನಾಥ ಶೆಟ್ಟಿ, ರಾಜೀವ ಶೆಟ್ಟಿ ಸಹಿತ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಧ್ಯಾಹ್ನ ನಡೆದ ರಾಜ್ಯಮಟ್ಟದ ಕೆಸರುಗದ್ದೆ ಕಂಬಳದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ತಾರಾ ಮೆರುಗು : ಸೀತಾರಾಮ ಧಾರವಾಹಿಯ ರಾಮ ಪಾತ್ರಧಾರಿ ಗಗನ್ ಚಿನ್ನಪ್ಪ, ನಟಿ ಕಾರುಣ್ಯ ರಾಮ್ ಉಪಸ್ಥಿತರಿದ್ದು, ತುಳುವಿನಲ್ಲಿ ಮಾತನಾಡಿದರು. ತೀರ್ಪುಗಾರರಾದ ನಿರಂಜನ ರೈ ಮಠಂತಬೆಟ್ಟು ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.