DAKSHINA KANNADA
ಪುತ್ತೂರು – ರಾತ್ರೋರಾತ್ರಿ ಬಿಜೆಪಿ ಮುಖಂಡನ ಮನೆ ತೆರವು – ಪೋಲೀಸ್ ಮತ್ತು ಬಿಜೆಪಿ ಮುಖಂಡರ ಮಧ್ಯೆ ಮಾತಿನ ಚಕಮಕಿ
ಪುತ್ತೂರು ಫೆಬ್ರವರಿ 05: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ದಿಗೆ ಸಂಬಂಧಿಸಿದಂತೆ ದೇವಸ್ಥಾನ ಸುತ್ತಮುತ್ತಲಿನ ಮನೆಗಳ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ನಿನ್ನೆ ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಅವರ ಮನೆಯನ್ನು ರಾತ್ರೋರಾತ್ರಿ ನೆಲಸಮಗೊಳಿಸಲಾಗಿದೆ. ಈ ಪ್ರಕರಣ ವಿವಾದಕ್ಕೆ ತಿರುಗಿದ್ದು, ಮನೆ ನೆಲಸಮ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಬಿಜೆಪಿ ಕಾರ್ಯಕರ್ತರು ಪೊಲೀಸರಿಗೆ ಆಗ್ರಹಿಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಇರುವ ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಅವರ ಮನೆಯನ್ನು ನಿನ್ನೆ ರಾತ್ರಿ ನೆಲಸಮಗೊಳಿಸಲಾಗಿದೆ. ಓಮ್ನಿ ಕಾರಿನಲ್ಲಿ ಬಂದ ತಂಡ ಈ ಕೃತ್ಯ ನಡೆಸಿದೆ ಎಂದು ಆರೋಪಿಸಲಾಗಿದ್ದು, ಈ ವೇಳೆ ಮನೆಯಲ್ಲಿದ್ದ ನಾಯಿ ಮರಿಗಳ ಮೇಲೆ ಮನೆ ಉರುಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ ಮನೆಯ ಸಿಲಿಂಡರ್ ಗಳನ್ನು ಪಕ್ಕದ ಚರಂಡಿಗೆ ಎಸೆದಿದ್ದಾರೆ. ಈ ವೇಳೆ ಮನೆ ಯಜಮಾನ ರಾಜೇಶ್ ಬನ್ನೂರು ಸ್ಥಳಕ್ಕೆ ಬಂದ ಸಂದರ್ಭದಲ್ಲಿ ಅವರನ್ನು ಕಟ್ಟಿಹಾಕಿ ಮನೆ ನೆಲಸಮ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನಾ ಸ್ಥಳದಲ್ಲಿ ಸಾರ್ವಜನಿಕರ ಜಮಾವಣೆಯಾಗಿದ್ದು, ಪೋಲೀಸ್ ಮತ್ತು ಬಿಜೆಪಿ ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮನೆ ನೆಲಸಮ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಶಾಸಕ ಅಶೋಕ್ ಕುಮಾರ್ ರೈ, ವಿನಯ್ ಸುವರ್ಣ ಎನ್ನುವವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಕಾರ್ಯಕರ್ತರು ಪೊಲೀಸರನ್ನು ಒತ್ತಾಯಿಸಿದ್ದಾರೆ.