DAKSHINA KANNADA
ಪುತ್ತೂರು ದೇವಸ್ಥಾನದ ಅಭಿವೃದ್ಧಿ ಹೆಸರಿನಲ್ಲಿ ಆಡಳಿತ ಮಂಡಳಿಯ ಅನಾಗರಿಕ ವರ್ತನೆ – ರಾತ್ರೋರಾತ್ರಿ ಶ್ವಾನ ಪ್ರೇಮಿಯ ಮನೆ ಧ್ವಂಸ
ಪುತ್ತೂರು ಫೆಬ್ರವರಿ 05: ಶ್ರೀ ಮಹಾಲಿಂಗೇಶ್ವರ ದೇಗುಲದ ವಠಾರದ ಮನೆಗಳ ತೆರವು ಕಾರ್ಯಾಚರಣೆ ಮುಂದುವರಿದಿದೆ. ಕೆಲವರ ವಿರೋಧದ ನಡುವೆಯೂ ತೆರವು ಕಾರ್ಯಾಚರಣೆ ನಡೆಯುತ್ತಿದೆ, ಈ ನಡುವೆ ಕಾರ್ಯಾಚರಣೆಯ ವೇಳೆ ರಾತ್ರೋರಾತ್ರಿ ಶ್ವಾನ ಪ್ರೇಮಿಯೊಬ್ಬರ ಮನೆಯನ್ನು ಆಡಳಿತ ಮಂಡಳಿ ಕಡೆವಿ ಹಾಕಿದ್ದು, ಮನೆಯೊಳಗಿದ್ದ ನಾಲ್ಕು ನಾಯಿ ಮರಿಗಳು ಸಾವನಪ್ಪಿದೆ ಎಂದು ಹೇಳಲಾಗಿದೆ. ಆಡಳಿತ ಮಂಡಳಿ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
60 ಕೋ.ರೂ.ವೆಚ್ಚದ ಮಾಸ್ಟರ್ ಪ್ಲಾನ್‌ಗೆ ಪೂರಕವಾಗಿ ಶ್ರೀ ಮಹಾಲಿಂಗೇಶ್ವರ ದೇಗುಲದ ವಠಾರದ ಮನೆಗಳ ತೆರವು ಕಾರ್ಯಾಚರಣೆ ಮುಂದುವರಿದಿದೆ. ಈಗಾಗಲೇ ಬಹುತೇಕ ಮನೆಗಳನ್ನು ತೆರವುಗೊಳಿಸಲಾಗಿದೆ. ಈ ನಡುವೆ ರಾತ್ರೋರಾತ್ರಿ ಶ್ವಾನ ಪ್ರೇಮಿಯೊಬ್ಬರ ಮನೆಯನ್ನು ಕೆಡವಲಾಗಿದೆ.
ರಾಜೇಶ್ ಬನ್ನೂರು ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಇವರ ಮನೆಯ ಆವರಣದಲ್ಲಿದ್ದ ನಾಯಿ ಮರಿಗಳನ್ನೂ ಸಂರಕ್ಷಿಸದೆ ಮನೆ ಕೆಡವಲಾಗಿದೆ. ಈ ವೇಳೆ ಮನೆಯೊಳಗೆ ಸಿಲುಕಿ ನಾಲ್ಕು ನಾಯಿ ಮರಿಗಳು ಸಾವನಪ್ಪಿದೆ ಎಂದು ಹೇಳಲಾಗಿದೆ. ಯಾವುದೇ ನೋಟೀಸ್ ನೀಡದೆ ಏಕಾಏಕಿ ತೆರವು ಕಾರ್ಯಾಚರಣೆ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.