DAKSHINA KANNADA
ಪುತ್ತೂರು: ಬನ್ನೂರಿನಲ್ಲಿ ಗುಡ್ಡ ಕುಸಿತ, ನಿರ್ಮಾಣ ಹಂತದ ಮನೆ ಸಂಪೂರ್ಣ ನಾಶ…

ಪುತ್ತೂರು, ಜುಲೈ 11: ಗುಡ್ಡ ಜರಿದು ನಿರ್ಮಾಣ ಹಂತದ ಮನೆಯೊಂದು ಸಂಪೂರ್ಣ ನಾಶವಾದ ಘಟನೆ ಪುತ್ತೂರಿನ ಬನ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕುಂಬಾಡಿ ಎಂಬಲ್ಲಿ ನಡೆದಿದೆ. ಕುಂಬಾಡಿಯ ರಾಮ್ ಭಟ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ನಿರ್ಮಾಣ ಹಂತದ ಈ ಮನೆ ಮೇಲೆ ಜುಲೈ 1 ರಂದು ಮನೆ ಹಿಂಬದಿಯ ಗುಡ್ಡದ ಮಣ್ಣು ಜಾರಿ ಭಾಗಶ ಹಾನಿಯಾಗಿತ್ತು.
ಇಂದು ಮತ್ತೆ ಭಾರೀ ಶಬ್ದದೊಂದಿಗೆ ಗುಡ್ಡದಿಂದ ಬಂಡೆ ಸಹಿತ ಮಣ್ಣು ಮನೆಯ ಮೇಲೆ ಬಿದ್ದಿದ್ದು, ಮನೆಯ ಅವಶೇಷಗಳನ್ನು ಸುಮಾರು 20 ಮೀಟರ್ ದೂರಕ್ಕೆ ರಸ್ತೆ ಬದಿಗೆ ತಳ್ಳಿದೆ. ಗುಡ್ಡದ ಮಣ್ಣನ್ನು ಅವೈಜ್ಞಾನಿಕವಾಗಿ ಕೊರೆದ ಪರಿಣಾಮವೇ ಈ ಅವಘಡಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ಧಾರೆ.

ಗುಡ್ಡದ ಮೇಲ್ಗಡೆಯಿಂದ ಈಗಲೂ ಮಣ್ಣು ಸಹಿತ ನೀರು ಹರಿಯುತ್ತಿದ್ದು, ಇಂದು ವೇಳೆ ಮಳೆ ಮತ್ತೆ ಸುರಿದಲ್ಲಿ, ಗುಡ್ಡದ ಮಣ್ಣು ಹಾಗು ಕಲ್ಲು ರಸ್ತೆ ಮತ್ತು ರಸ್ತೆಯ ಪಕ್ಕದಲ್ಲೇ ಇರುವ ಮನೆಗೂ ಹಾನಿ ಮಾಡಲಿದೆ ಎನ್ನುವ ಆತಂಕದಲ್ಲಿ ಸ್ಥಳೀಯರಿದ್ದಾರೆ.
ಸ್ಥಳಕ್ಕೆ ಬನ್ನೂರು ಗ್ರಾಮಪಂಚಾಯತ್ ಅಧ್ಯಕ್ಷೆ ಜಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ತಹಶೀಲ್ದಾರ್ ಗಮನಕ್ಕೆ ತರಲಾಗಿದ್ದು, ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ. ತಕ್ಷಣವೇ ಗುಡ್ಡದಿಂದ ಹರಿಯುವ ನೀರಿಗೆ ತೋಡಿನ ವ್ಯವಸ್ಥೆಯನ್ನು ಮಾಡಲು ಪಂಚಾಯತ್ ವಿ.ಎ ಗೆ ಸೂಚಿಸಲಾಗಿದೆ ಎಂದು ಪಂಚಾಯತ್ ಅಧ್ಯಕ್ಷೆ ಜಯ ತಿಳಿಸಿದ್ದಾರೆ.