LATEST NEWS
ಪುತ್ತೂರು ಗಾಂಜಾ ಮಾರಾಟಕ್ಕೆ ಯತ್ನ 4 ಆರೋಪಿಗಳ ಬಂಧನ

ಪುತ್ತೂರು ಡಿಸೆಂಬರ್ 1: ಪುತ್ತೂರಿನ ನೈತಾಡಿ ಭಗತ್ ಸಿಂಗ್ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಪೈಯೋಳಿಕೆ ಗ್ರಾಮ ಮಂಜೇಶ್ವರ ನಿವಾಸಿ ಮಹಮ್ಮದ್ ಅರ್ಷದ್ (26), ಮಂಗಲ್ಪಾಡಿ ಗ್ರಾಮ ಉಪ್ಪಳ ನಿವಾಸಿ ರಿಯಾಜ್ (27), ಕಬಕ ಗ್ರಾಮ ಪುತ್ತೂರು ತಾಲೂಕು ನಿವಾಸಿ ಅಬ್ದುಲ್ ಖಾದರ್ ಜಾಬೀರ್ (23) ಹಾಗೂ ಬನ್ನೂರು ಗ್ರಾಮ ಮತ್ತು ಅಂಚೆ ಪುತ್ತೂರು ತಾಲೂಕು ನಿವಾಸಿ ಅಬ್ದುಲ್ ನಜೀರ್ (37) ಎಂದು ಗುರುತಿಸಲಾಗಿದೆ.

ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ನೈತಾಡಿ ಭಗತ್ ಸಿಂಗ್ ಸಾರ್ವಜನಿಕ ರಸ್ತೆಯಲ್ಲಿ 2 ಕಾರುಗಳಲ್ಲಿ ಆರೋಪಿಗಳು ಕೇರಳ ಕಡೆಯಿಂದ ಪುತ್ತೂರು ಹಾಗೂ ಸುಳ್ಯ ಮುಂತಾದ ಕಡೆಗಳಲ್ಲಿ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ಸಂದರ್ಭ ಪುತ್ತೂರು ನಗರ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಜಂಬೂರಾಜ್ ಮಹಾಜನ್ ಮತ್ತು ಠಾಣಾ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಗಳ ಸಹಿತ ಆರೋಪಿಗಳ ಸ್ವಾಧೀನದಲ್ಲಿದ್ದ 1,25,000 ರೂ. ಮೌಲ್ಯದ 6 ಕೆಜಿ 360 ಗ್ರಾಂ ತೂಕದ ಗಾಂಜಾ, ಒಟ್ಟು 12,000 ರೂ ಅಂದಾಜು ಮೌಲ್ಯದ 5 ಮೊಬೈಲ್‌ಗಳು ಮತ್ತು ಕೃತ್ಯಕ್ಕೆ ಬಳಸಿದ ರೂ 5 ಲಕ್ಷ ಅಂದಾಜು ಮೌಲ್ಯದ 2 ಕಾರುಗಳು ಹಾಗೂ ಆರೋಪಿಗಳ ಬಳಿಯಿದ್ದ 15 ಇಂಚು ಉದ್ದದ ಕತ್ತಿ ಮತ್ತು 14 ಇಂಚು ಉದ್ದದ ಹರಿತವಾದ ಚಾಕನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.