DAKSHINA KANNADA
ಪುತ್ತೂರು ನಗರಸಭೆ – ಬಿಜೆಪಿ ಕಾಂಗ್ರೇಸ್ ಗೆ ತಲಾ ಒಂದು ಸ್ಥಾನ ಎರಡೂ ಕಡೆ ಸೋತ ಪುತ್ತಿಲ ಪರಿವಾರದ ಅಭ್ಯರ್ಥಿಗಳು –
ಪುತ್ತೂರು ಡಿಸೆಂಬರ್ 30 : ಪ್ರಮುಖ ಸ್ಥಳೀಯ ಚುನಾವಣೆ ಯಾಗಿದ್ದ ಪುತ್ತೂರು ನಗರಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ತಲಾ ಒಂದು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಪುತ್ತಿಲ ಪರಿವಾರದ ಅಭ್ಯರ್ಥಿಗಳು ಎರಡೂ ಕಡೆ ಸೋಲು ಕಂಡಿದ್ದಾರೆ. ವಾರ್ಡ್ 1ರಲ್ಲಿ ಕಾಂಗ್ರೆಸ್‌ನ ದಿನೇಶ ಶೇವಿರೆ 427 ಮತಗಳನ್ನು ಪಡೆಯುವ ಮೂಲಕ ಪುತ್ತಿಲ ಪರಿವಾರದ ಅನ್ನಪೂರ್ಣ (308 ಮತ) ವಿರುದ್ದ ಗೆಲುವಿನ ನಗೆ ಬೀರಿದರು. ಬಿಜೆಪಿ ಯ ಸುನೀತಾ 219 ಮತ ಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟರು. ನೋಟಾಕ್ಕೆ ನಾಲ್ಕು ಮತಗಳು ಚಲಾವಣೆ ಆಗಿವೆ.
ವಾರ್ಡ್ 11ರಲ್ಲಿ ಬಿಜೆಪಿಯ ರಮೇಶ್ ರೈ ಅವರು 431 ಮತ ಪಡೆಯುವ ಮೂಲಕ ಕಾಂಗ್ರೆಸ್‌ನ ದಾಮೋದರ ಭಂಡಾರ್ಕರ್ (400 ಮತ) ವಿರುದ್ಧ ಗೆಲುವು ಸಾಧಿಸಿದರು. ಇಲ್ಲಿ ಪುತ್ತಿಲ ಪರಿವಾರದ ಅಭ್ಯರ್ಥಿ ಚಿಂತನ್ 216 ಮತ ಪಡೆದಿದ್ದಾರೆ. ನೋಟಾಕ್ಕೆ 6 ಮತಗಳು ಚಲಾವಣೆ ಆಗಿವೆ. ಇಬ್ಬರು ಸದಸ್ಯರ ಅಕಾಲಿಕ ಮರಣದಿಂದಾಗಿ ತೆರವಾಗಿದ್ದ ಎರಡು ಸ್ಥಾನಗಳಿಗೆ ಡಿ.27ರಂದು ಮತದಾನ ನಡೆದಿತ್ತು.
ಇಲ್ಲಿನ ನಗರ ಸಭೆಯ 31 ಸ್ಥಾನಗಳಲ್ಲಿ 25ರಲ್ಲಿ ಬಿಜೆಪಿ ಅಭ್ಯರ್ಥಿಗಳು ಹಾಗೂ 6 ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರು. ಸದಸ್ಯರ ಅಕಾಲಿಕ ನಿಧನದಿಂದ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದು ಸ್ಥಾನಗಳನ್ನು ಕಳೆದುಕೊಂಡಿದ್ದವು. ಈ ಹಿಂದೆ ಬಿಜೆಪಿ ಸದಸ್ಯರು ಪ್ರತಿನಿಧಿಸಿದ್ದ ವಾರ್ಡ್ 1ರಲ್ಲಿ ಈ ಸಲ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ, ಕಳೆದ ಸಲ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದ ವಾರ್ಡ್ 11ರಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆ.