DAKSHINA KANNADA
ಪುತ್ತೂರು- ಬೆದ್ರಾಳ ತೋಡಿಗೆ ಕುಸಿದ ಗುಡ್ಡ – ಅಪಾಯದಂಚಿನಲ್ಲಿ ಮನೆ
ಪುತ್ತೂರು ಅಗಸ್ಟ್ 03: ಪುತ್ತೂರು ಪೇಟೆಯ ರಾಜಕಾಲುವೆ ಸಹಿತ ಹಲವು ಉಪ ತೋಡುಗಳ ಮಳೆ ನೀರು ಹರಿಯುವ ಬೆದ್ರಾಳ ತೋಡಿಗೆ ಗುಡ್ಡ ಕುಸಿದ ಪರಿಣಾಮ ತೋಡು ಸಂಪೂರ್ಣ ಮುಚ್ಚಿ ಹೋಗಿ ಅಕ್ಕಪಕ್ಕದ ಅಡಿಕೆ ತೋಟಗಳು ಜಲಾವೃತವಾದ ಘಟನೆ ನಡೆದಿದ್ದು, ಮನೆಯೊಂದು ಅಪಾಯದ ಅಂಚಿನಲ್ಲಿದೆ.
ಕೆಮ್ಮಿಂಜೆ ಗ್ರಾಮದ ಪುತ್ತೂರಮೂಲೆ ಮತ್ತು ಕೆಮ್ಮಿಂಜೆ ಬೈಲು ಎಂಬಲ್ಲಿ ಬೆದ್ರಾಳ ತೋಡಿಗೆ ಭಾರಿ ಪ್ರಮಾಣದ ಗುಡ್ಡೆಯ ಮಣ್ಣು ಕುಸಿದು ಬಿದ್ದಿದೆ. ಈ ಹಿನ್ನಲೆ ತೋಡಿನಲ್ಲಿ ನೀರು ಹರಿಯುವಿಕೆಗೆ ಅಡ್ಡಿಯಾಗಿ ಪಕ್ಕದಲ್ಲಿರುವ ಅಡಿಕೆ ತೋಟಗಳಿಗೆ ನೀರು ನುಗ್ಗಿ ತೋಟಗಳು ಜಲಾವೃತವಾಗಿದೆ. ಮೂರು ಮಂದಿಯ ತೋಟಗಳು ಜಲಾವೃತಗೊಂಡಿದೆ. ತೋಡಿನ ಬದಿಯಲ್ಲಿರುವ ಯಶೋಧಾರ ಎಂಬವರ ಮನೆಯೂ ಅಪಾಯದಂಚಿನಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕೆ ನಗರಸಭಾ ಸದಸ್ಯ ಬಾಲಚಂದ್ರ, ಪೌರಾಯುಕ್ತ ಮಧು ಎಸ್ ಮನೋಹರ್ ಮತ್ತು ನಗರಸಭೆ ಅಧಿಕಾರಿಗಳು ತೆರಳಿದ್ದಾರೆ.
ಭಾರಿ ಪ್ರಮಾಣದ ಗುಡ್ಡೆ ಕುಸಿದ ಪರಿಣಾ ಬೆದ್ರಾಳ ತೋಡು ಮುಚ್ಚಿಹೋಗಿದೆ. ತುಂಬಿ ಹರಿಯುವ ತೋಡಿನಲ್ಲಿ ಹರಿಯುವ ಮಳೆ ನೀರು ತನ್ನ ದಿಕ್ಕು ಬದಾಯಿಸಿ ಪಕ್ಕದ ತೋಟಗಳಿಗೆ ನುಗ್ಗಿ ನೀರು ಮೇಲೇರುತ್ತಿದೆ. ಇದರಿಂದಾಗಿ ಮನೆಗಳು ಕೂಡಾ ಅಪಾಯದಲ್ಲಿದೆ. ತೋಡಿಗೆ ಬಿದ್ದ ಮಣ್ಣು ತೆರವು ಮಾಡಲು ಜೆಸಿಬಿ ಹೋಗಲು ದಾರಿಯೂ ಇಲ್ಲ. ಮಾನವ ಶ್ರಮವೂ ಇಲ್ಲಿ ಅಸಾಧ್ಯದ ಪರಿಸ್ಥಿತಿ ನಿರ್ಮಾಣವಾಗಿದೆ.