Connect with us

    DAKSHINA KANNADA

    ಪುತ್ತಿಲ ಪರಿವಾರ ಘರ್ ವಾಪ್ಸಿ – ಅರುಣ್ ಕುಮಾರ್ ಪುತ್ತಿಲರೊಂದಿಗೆ ಬಿಜೆಪಿಯೊಂದಿಗೆ ವಿಲೀನಕ್ಕೆ ಒಪ್ಪಿಗೆ….!

    ಪುತ್ತೂರು: ಹಲವು ಸುತ್ತಿನ ಮಾತುಕತೆ ಬಳಿಕ ಕೊನೆಗೂ ಬಿಜೆಪಿ ದುಃಸ್ವಪನ್ನವಾಗಿ ಕಾಡಿದ್ದ ಪುತ್ತಿಲ ಪರಿವಾರದ ಮುಖ್ಯಸ್ಥ, ಹಿಂದೂ ಪರಹೋರಾಟಗಾರ ಅರುಣ್ ಕುಮಾರ್ ಪುತ್ತಿಲ ಬಿಜೆಪಿಗೆ ಸೇರ್ಪಡೆಯಾಗುವುದು ಖಚಿತವಾಗಿದೆ.

    ಹಲವು ಸುತ್ತಿನ ಮಾತುಕತೆ ಬಳಿಕ ಪುತ್ತಿಲ ಪರಿವಾರ ಬಿಜೆಪಿಯೊಂದಿಗೆ ವಿಲೀನವಾಗಲಿದೆ.  ಇದೀಗ ಬಿಜೆಪಿ ಮರುಸೇರ್ಪಡೆಯಾಗಲು ಪುತ್ತಿಲ ಒಪ್ಪಿಗೆ ನೀಡಿದ್ದಾರೆ. ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ನೇತೃತ್ವದಲ್ಲಿ ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಪುತ್ತಿಲರ ಜೊತೆಗಿನ ಸಂಧಾನ ಯಶಸ್ವಿಯಾಗಿದೆ. ಈ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಉಪಸ್ಥಿತರಿದ್ದರು.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ದೊರೆಯದೇ ಇದ್ದ ಹಿನ್ನೆಲೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಹಿಂದುತ್ವ ಸಿದ್ಧಾಂತದಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೆಲವೇ ಮತಗಳ ಅಂತರಲ್ಲಿ ಸೋಲು ಕಂಡಿದ್ದರು. ರಾಜಕೀಯವಾಗಿ ಬಿಜೆಪಿಯಿಂದ ದೂರವಾದ ಅರುಣ್ ಕುಮಾರ್ ಪುತ್ತಿಲ ಅವರ ನೇತೃತ್ವದಲ್ಲಿ ಬಳಿಕ ಪುತ್ತಿಲ ಪರಿವಾರ ಸಂಘಟನೆ ಅಸ್ತಿತ್ವಕ್ಕೆ ತಂದು ಬಿಜೆಪಿಗೆ ಸಡ್ಡು ಹೊಡೆಯುವ ರೀತಿಯ ಕೆಲಸ ಕಾರ್ಯಗಳು ನಡೆಯುತ್ತಿದ್ದವು. ನಂತರದ ಬೆಳವಣಿಗೆಯಲ್ಲಿ ಪುತ್ತಿಲ ಅವರು ಬಿಜೆಪಿಗೆ ಸೇರ್ಪಡೆಯಾಗುವುದು ಮತ್ತು ಪುತ್ತಿಲ ಪರಿವಾರವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವ ನಿಟ್ಟಿನಲ್ಲಿ ಬಿಜೆಪಿ, ಸಂಘ ಪರಿವಾರ ಮತ್ತು ಪುತ್ತಿಲ ಪರಿವಾರದ ಪ್ರಮುಖರ ಮಧ್ಯೆ ಹಲವು ಸುತ್ತಿನ ಮಾತುಕತೆಗಳು ನಡೆದಿತ್ತು. ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ಬಿಜೆಪಿ ಅಧ್ಯಕ್ಷತೆ ನೀಡುವುದಾದರೆ ಮಾತ್ರ ಅವರು ಬಿಜೆಪಿಗೆ ಸೇರ್ಪಡೆಯಾಗಿ ಪುತ್ತಿಲ ಪರಿವಾರವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವ ಕುರಿತು ಪುತ್ತಿಲ ಪರಿವಾರದ ಕಾರ್ಯಕರ್ತರು ಸಭೆನಡೆಸಿ ತೀರ್ಮಾನ ಕೈಗೊಂಡಿದ್ದರು. ಆದ್ರೆ ಪಕ್ಷಕ್ಕೆ ಬೇಷರತ್ ಆಗಿ ಬರುವುದಾದರೆ ಮಾತ್ರ ಸ್ವಾಗತ. ಹುದ್ದೆ ನೀಡುವ ವಿಚಾರ ಏನಿದ್ದರೂ ಸೇರ್ಪಡೆ ಬಳಿಕ ಪಕ್ಷದ ನಾಯಕರು ತೀರ್ಮಾನಿಸುತ್ತಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರ ಸಹಿತ ಪ್ರಮುಖರು ಸ್ಪಷ್ಟಪಡಿಸಿದ್ದರು.

    ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಅರುಣ್ ಕುಮಾರ್ ಪುತ್ತಿಲ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಮತ್ತು ಮುಂದಿನ ಎಲ್ಲಾ ಚುನಾವಣೆಗಳಲ್ಲಿಯೂ ದ.ಕ.ಜಿಲ್ಲೆಯಲ್ಲಿ ಪುತ್ತಿಲ ಪರಿವಾರದ ಸ್ಪರ್ಧೆ ಇರಲಿದೆ ಎಂದು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಬಹಿರಂಗವಾಗಿ ಘೋಷಿಸಿದ್ದರು. ದ.ಕ.ಲೋಕಸಭಾ ಕ್ಷೇತ್ರದಲ್ಲಿ ನಳಿನ್ ಕುಮಾರ್ ಕಟೀಲ್ ಅವರೇ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತ ಎಂಬ ಮಾತುಗಳು ಕೇಳಿ ಬರುತ್ತಿದ್ದವು.ಇದೀಗ ಬಿಜೆಪಿ ಅಭ್ಯರ್ಥಿಯಾಗಿ ನಿವೃತ್ತ ಸೇನಾಧಿಕಾರಿ ಬ್ರಿಜೇಶ್ ಚೌಟ ಅವರು ಆಯ್ಕೆಯಾಗಿರುವುದರಿಂದ ಪುತ್ತಿಲ ಪರಿವಾರದ ನಡೆ ತಿರುವು ಪಡೆದಿತ್ತು.

    ಇದೀಗ ಬದಲಾದ ಕಾಲ ಘಟ್ಟದಲ್ಲಿ ಬಿಜೆಪಿ ಮತ್ತು ಪುತ್ತಿಲ ಪರಿವಾರದ ಪ್ರಮುಖರಿಂದ ಒಮ್ಮತದ ತೀರ್ಮಾನವಾಗಿದ್ದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಮ್ಮುಖದಲ್ಲೇ, ಬೆಂಗಳೂರಿನಲ್ಲಿ, ಅಥವಾ ಮಂಗಳೂರಿನಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸಿ ಅರುಣ್ ಕುಮಾರ್ ಮತ್ತು ಟೀಂ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ . ಈ ಮೂಲಕ ಕಳೆದ ವಿಧಾನಸಭಾ ಚುನಾವಣೆಯಿಂದ ಆರಂಭಗೊಂಡಿದ್ದ ಬಿಜೆಪಿ-ಪುತ್ತಿಲರ ನಡುವಿನ ಸಂಘರ್ಷ ಕೊನೆಗೂ ಸಂಧಾನ ಯಶಸ್ವಿಯಾಗಿದ್ದು ದಕ್ಷಿಣ ಕನ್ನಡದಲ್ಲಿ ಬಿಜೆಪಿಗೆ ಆನೆಬಲ ಬಂದಂತಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply