DAKSHINA KANNADA
ಫೆಬ್ರವರಿ 5 ರ ಪುತ್ತಿಲ ಸಮಾಲೋಚನಾ ಸಭೆ ಮೇಲೆ ಎಲ್ಲರ ಕಣ್ಣು – ಬಿಜೆಪಿ ಸೇರ್ಪಡೆ ನಿರ್ಣಾಯಕ ಹಂತಕ್ಕೆ….?

ಪುತ್ತೂರು ಫೆಬ್ರವರಿ 04: ಪುತ್ತಿಲ ಪರಿವಾರ ಹಾಗೂ ಬಿಜೆಪಿ ನಡುವಿನ ಬಿಕ್ಕಟ್ಟು ಮುಂದುವರೆದಿದ್ದು, ನಾಳೆ ಫೆಬ್ರವರಿ 5 ರಂದು ನಡೆಯುವ ಪುತ್ತಿಲ ಪರಿವಾರದ ಸಮಾಲೋಚನೆ ಸಭೆ ನಿರ್ಣಾಯಕವಾಗಲಿದೆ ಎಂದು ಹೇಳಲಾಗುತ್ತಿದೆ.
ಪುತ್ತೂರಿನ ಹಿಂದು ಸಂಘಟಕ ಅರುಣ್ ಕುಮಾರ್ ಪುತ್ತಿಲ ಬಿಕ್ಕಟ್ಟು ಇನ್ನೂ ಇತ್ಯರ್ಥವಾಗದೇ ಇರುವುದು ಬಿಜೆಪಿ ಮತ್ತು ಪುತ್ತಿಲ ಪರಿವಾರ ಇಬ್ಬರಿಗೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ!. ಎರಡು ದಿನಗಳ ಹಿಂದೆಯಷ್ಟೆ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಪುತ್ತಿಲ ಬಿಜೆಪಿ ಸೇರ್ಪಡೆಗೆ ಮೂರು ಷರತ್ತುಗಳ ಬಗ್ಗೆ ಹೇಳಿಕೆ ನೀಡಿರುವುದು ಪುತ್ತಿಲ ಪರಿವಾರ ವ್ಯಗ್ರವಾಗುವಂತೆ ಮಾಡಿದೆ. ಈ ನಡುವೆ ಫೆ.5ರಂದು ಮುಂದಿನ ನಡೆ ಬಗ್ಗೆ ಪುತ್ತಿಲ ಪರಿವಾರ ಪುತ್ತೂರಲ್ಲಿ ಸಭೆ ಏರ್ಪಡಿಸಿದೆ. ಈ ಸಭೆಯ ತೀರ್ಮಾನ ಪುತ್ತೂರಿನ ಮುಂದಿನ ರಾಜಕೀಯ ಬೆಳವಣಿಗೆಗಳಿಗೆ ದಿಕ್ಕೂಚಿಯಾಗುವ ನಿರೀಕ್ಷೆ ಇದೆ.

ಪುತ್ತಿಲ ಜತೆಗಿನ ಸಂಧಾನ ಮಾತುಕತೆಯನ್ನು ಒಂದು ಹಂತದಲ್ಲಿ ದಲ್ಲಿ ಬಿಜೆಪಿ ಕೈಬಿಟ್ಟಿತ್ತು. ಆದರೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಪುನರಪಿ ಪುತ್ತೂರು ಬಿಕ್ಕಟ್ಟು ಪರಿಹರಿಸಲು ರಾಜ್ಯ ನಾಯಕರು ಆಸಕ್ತಿ ತೋರಿಸಿದ್ದರು. ರಾಜ್ಯ ನಾಯಕರ ಸೂಚನೆ ಮೇರೆಗೆ ಸಂಘಪರಿವಾರ ಅಖಾಡಕ್ಕೆ ಇಳಿದಿತ್ತು. ಹಲವು ಸುತ್ತಿನ ಮಾತುಕತೆ ಬಳಿಕ ಕೊನೆಗೆ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಕುಂತೂರು ನೇತೃತ್ವದಲ್ಲಿ ಬಿಕ್ಕಟ್ಟು ಶಮನ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಷರತ್ತು ರಹಿತವಾಗಿ ಪಕ್ಷಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ಪ್ರಸ್ತಾಪಗೊಂಡಿದೆ. ಆದರೆ ಈ ಷರತ್ತನ್ನು ಪುತ್ತಿಲ ಪರಿವಾರ ಸಮ್ಮತಿಸುತ್ತದೆಯೇ ಅಥವಾ ಇಲ್ಲವೇ ಎನ್ನುವುದು ಫೆ.5ರ ಸಭೆಯಲ್ಲಿ ತೀರ್ಮಾನವಾಗಲಿದೆ.
ಮೂಲಗಳು ಹೇಳುವಂತೆ, ‘ಬಿಜೆಪಿ ಪಕ್ಷದಲ್ಲಿ ಅಧಿಕೃತ ಜವಾಬ್ದಾರಿ ಘೋಷಿಸಿದ ಬಳಿಕವೇ ಸೇರ್ಪಡೆ ಮಾತು’ ಎಂದು ಅರುಣ್ ಕುಮಾರ್ ಪುತ್ತಿಲ ಪಟ್ಟುಹಿಡಿದಿದ್ದಾರೆ ಎನ್ನಲಾಗಿದ್ದು, ‘ಬೇಷರತ್ತಾಗಿ ಪಕ್ಷಕ್ಕೆ ಬನ್ನಿ, ಬಳಿಕ ಹುದ್ದೆಯ ಮಾತು’ ಎಂದು ಪಕ್ಷ ನಾಯಕರು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಪುತ್ತಿಲ ಪರಿವಾರ ವಿಸರ್ಜನೆಗೂ ನಿರಾಕರಿಸಿದ್ದು, ಇತ್ತಂಡಗಳ ಬಿಗಿ ಪಟ್ಟಿನಿಂದಾಗಿ ಸದ್ಯ ಈ ಬಿಕ್ಕಟ್ಟು ಹೀಗೆಯೇ ಮುಂದುವರಿದಿದೆ.