DAKSHINA KANNADA
ಪುತ್ತಿಲ ಪರಿವಾರ ಬಿಜೆಪಿ ಸೇರ್ಪಡೆ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ – ಪುತ್ತಿಲ ಪರಿವಾರ ಸ್ಪಷ್ಟನೆ
ಪುತ್ತೂರು ಫೆಬ್ರವರಿ 02: ಲೋಕಸಭಾ ಚುನಾವಣೆಗೆ ಮೊದಲು ಅರುಣ್ ಕುಮಾರ್ ಪುತ್ತಿಲ ನೇತೃತ್ವದ ಪುತ್ತಿಲ ಪರಿವಾರ ಬಿಜೆಪಿ ಸೇರ್ಪಡೆ ಕುರಿತು ಈವರೆಗೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಪುತ್ತಿಲ ಪರಿವಾರ ಸ್ಪಷ್ಟನೆ ನೀಡಿದೆ.
ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಪುತ್ತಿಲ ಪರಿವಾರದಲ್ಲೇ ವಿರೋಧ ಎನ್ನುವ ವರದಿಗೆ ಪುತ್ತಿಲ ಪರಿವಾರ ತನ್ನ ಅಧಿಕೃತ ವಾಟ್ಸ್ ಅಪ್ ಗ್ರೂಪ್ ನಲ್ಲಿ ಸ್ಪಷ್ಟನೆ ನೀಡಿದೆ. ಕಾರ್ಯಕರ್ತರ ಒತ್ತಾಸೆಯಂತೆ ಕಳೆದ ವಿಧಾನಸಭಾ ಚುನಾವಣೆಗೆ ಅರುಣ್ ಪುತ್ತಿಲ ಸ್ಪರ್ಧಿಸಿದ್ದು, ಈ ಹಿನ್ನಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಅಥವಾ ಲೋಕಸಭಾ ಚುನಾವಣೆಗೆ ಸ್ಪರ್ಧೆ ಕುರಿತ ನಿರ್ಧಾರವನ್ನು ಕಾರ್ಯಕರ್ತರ ಅಭಿಪ್ರಾಯದ ಮೇರೆಗೇ ತೆಗೆದುಕೊಳ್ಳಲಾಗುವುದು. ಈ ಹಿನ್ನಲೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮತ್ತು ಬಿಜೆಪಿ ಸೇರ್ಪಡೆಗೆ ಪುತ್ತಿಲ ಪರಿವಾರದ ಕಾರ್ಯಕರ್ತರ ವಿರೋಧ ಎರಡೂ ಸುದ್ದಿಗಳು ಸತ್ಯಕ್ಕೆ ದೂರವಾಗಿದೆ ಎಂದು ಪರಿವಾರ ಪ್ರಕಟನೆಯಲ್ಲಿ ತಿಳಿಸಿದೆ.
ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಪುತ್ತಿಲ ಪರಿವಾರದಲ್ಲೇ ವಿರೋಧ ಎಂಬ ತಲೆಬರಹದಡಿ The Mangalore Mirror.in ಒಂದು ವರದಿ ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಪುತ್ತಿಲ ಪರಿವಾರದ ಸಮಾಲೋಚನಾ ಸಮಾವೇಶ ಕರೆದಿರುವುದು ಕಾರ್ಯಕರ್ತರ ಜೊತೆ ಸಮಾಲೋಚನೆ ಮಾಡಲು. ಕಾರ್ಯಕರ್ತರ ಒತ್ತಾಸೆಯಂತೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಅರುಣ್ ಪುತ್ತಿಲರದು 30 ವರ್ಷಗಳ ಕಾರ್ಯಕರ್ತರೊಟ್ಟಿಗಿನ ಜೀವನ. ಪುತ್ತಿಲ ಪರಿವಾರದ ಕಾರ್ಯಕರ್ತರೆಲ್ಲ ಒಮ್ಮತದಿಂದಲೇ ಇದ್ದಾರೆ. ಯಾವೂದೇ ನಿರ್ಧಾರ ಕೈಗೊಳ್ಳುವುದಿದ್ದರೂ ಕಾರ್ಯಕರ್ತರ ಅಭಿಪ್ರಾಯಕ್ಕೆ ಮೊದಲ ಆದ್ಯತೆ ನೀಡುವ ನಿಟ್ಟಿನಲ್ಲಿ ಸಮಾವೇಶ ನಡೆಸಲಾಗುತ್ತಿದೆ ಎಂದು ಪುತ್ತಿಲ ಪರಿವಾರ ಸ್ಪಷ್ಟನೆ ನೀಡಿದೆ.