LATEST NEWS
ಉಡುಪಿ ಪರ್ಯಾಯ – ಪುತ್ತಿಗೆ ಶ್ರೀಗಳ ಅದ್ದೂರಿ ಪುರಪ್ರವೇಶ

ಉಡುಪಿ ಜನವರಿ 09: ನಾಲ್ಕನೇ ಬಾರಿ ಪರ್ಯಾಯ ಪೀಠ ಅಲಂಕರಿಸುತ್ತಿರುವ ಪುತ್ತಿಗೆ ಮಠದ ಹಿರಿಯ ಯತಿಗಳಾದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅದ್ದೂರಿಯಾಗಿ ಉಡುಪಿ ಪುರಪ್ರವೇಶ ಮಾಡಿದರು.
ತಮ್ಮ ಶಿಷ್ಯರೊಂದಿಗೆ ಸಂಪ್ರದಾಯದಂತೆ ಕನ್ನಾರ್ಪಾಡಿ ಜಯದುರ್ಗೆ ದೇವಸ್ಥಾನಕ್ಕೆ ಭೇಟಿನೀಡಿ ದೇವಿಗೆ ಪೂಜೆ ಸಲ್ಲಿಸಿದರು. ಬಳಿಕ ಉಭಯ ಯತಿಗಳು ಜೋಡುಕಟ್ಟೆ ಪ್ರವೇಶಿಸುತ್ತಿದ್ದಂತೆ ಸಾವಿರಾರು ಭಕ್ತರ ಜಯಘೋಷಗಳೊಂದಿಗೆ ವೇದ–ಮಂತ್ರ–ಮಂಗಳವಾದ್ಯ ಸಹಿತ ಭವ್ಯ ಸ್ವಾಗತ ಕೋರಲಾಯಿತು.

ಉಭಯ ಯತಿಗಳು ಜೋಡುಕಟ್ಟೆ ಪ್ರವೇಶಿಸಿ ಪಟ್ಟದ ದೇವರಾದ ವಿಠಲನಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಬಳಿಕ ಊರಿನ ಗಣ್ಯರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪೌರಾಯುಕ್ತರು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಯಶ್‌ಪಾಲ್ ಸುವರ್ಣ ಸಹಿತ ಗಣ್ಯರು ಯತಿಗಳಿಗೆ ಹೂಮಾಲೆ ಹಾಕಿ ಸ್ವಾಗತಿಸಿದರು.
ಜೋಡುಕಟ್ಟೆಯಿಂದ ಕಿನ್ನಿಮೂಲ್ಕಿವರೆಗೂ ಸುಮಾರು 1 ಕಿ.ಮೀ ಉದ್ದದ ಮೆರವಣಿಗೆಯ ಸಾಲು ಪುತ್ತಿಗೆ ಮಠದ ಪರ್ಯಾಯ ವೈಭವವನ್ನು ಸಾರುತ್ತಿತ್ತು. ಬಿರುದಾವಳಿಯೊಂದಿಗೆ ಆರಂಭವಾದ ಮೆರವಣಿಗೆಯಲ್ಲಿ ನಾಸಿಕ್ ಬ್ಯಾಂಡ್, ಡೋಲು, ಚಂಡೆ, ತಟ್ಟಿರಾಯ, ಛತ್ರಿ ಚಾಮರಗಳು, ಕೀಲುಕುದುರೆ, ಮರಗೋಲು, ವೇಷಧಾರಿಗಳು, ಗೀಗಿಪದ ಹಾಡುಗಾರರು, ಮಹಿಳಾ ಹಾಗೂ ಪುರುಷರ ಭಜನಾ ತಂಡಗಳು, ಹರೇರಾಮ ಹರೇಕೃಷ್ಣ ತಂಡ, ಮಹಿಷಾಸುರನ ವೇಷಧಾರಿಗಳು ಅಬ್ಬರಿಸಿದರು. 40ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಿದ್ದು ವಿಶೇಷವಾಗಿತ್ತು.