LATEST NEWS
ನಾಗರಪಂಚಮಿಯಂದು ಕುಡುಪು ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ

ಕುಡುಪು, ಜುಲೈ19 : ಕರಾವಳಿಯಲ್ಲಿ ಈಗಾಗಲೇ ಅತಿರೇಕಕ್ಕೆ ಹೊಗಿರುವ ಕೊರೊನಾ ಸೊಂಕಿನಿಂದಾಗಿ ಈ ಬಾರಿಯ ನಾಗರಪಂಚಮಿ ಹಬ್ಬಕ್ಕೆ ಕುಡುಪು ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಶ್ರೀ ಅನಂತ ಪದ್ಮನಾಭ ದೇವಸ್ಥಾನ ಕುಡುಪುವಿನ ಆಡಳಿಯ ಮಂಡಳಿ, ”ಕ್ಷೇತ್ರದಲ್ಲಿ ಪ್ರತಿ ವರ್ಷ ಆಚರಿಸುವ ನಾಗರಪಂಚಮಿಯು ಈ ಬಾರಿ ಜುಲೈ 25 ರ ಶನಿವಾರದಂದು ನಿಗದಿಯಾಗಿದ್ದು ಈ ದಿನ ಕೋವಿಡ್ 19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕ ಸಂಖ್ಯೆಯಲ್ಲು ಆಗಮಿಸುವ ಭಕ್ತಾಧಿಗಳಿಂದ ಸಾಮಾಜಿಕ ಅಂತರವನ್ನು ಕಾಡಪಾಡುವುದು ಕಷ್ಟಕರವಾಗುವುದರಿಂದ ಮುಂಜಾಗ್ರತ ಕ್ರಮವಾಗಿ ನಾಗರ ಪಂಚಮಿ ದಿನವಾದ ಜುಲೈ 25 ರಂದು ಭಕ್ತಾದಿಗಳಿಗೆ ಶ್ರೀ ಕ್ಷೇತ್ರಕ್ಕೆ ಭೇಟಿಯನ್ನು ನಿರ್ಬಂಧಿಸಲಾಗಿದೆ.

ಅಂದು ಎಲ್ಲಾ ಭಕ್ತಾಧಿಗಳಿಗೆ ದೇವಾಲಯದ ಆವರಣಕ್ಕೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ದಿನದಂದು ಯಾವುದೇ ಭಕ್ತಾಭಿಮಾನಿಗಳು ದೇವಾಲಯಕ್ಕೆ ಭೇಡಿ ನೀಡದೆ ಸಹಕರಿಸಬೇಕಾಗಿ ವಿನಂತಿ” ಎಂದು ತಿಳಿಸಲಾಗಿದೆ.
ಹಾಗೆಯೇ ”ನಾಗರ ಪಂಚಮಿ ದಿನದಂದು ದೇವಾಲಯದಲ್ಲಿ ಯಾವುದೇ ಸೇವೆಗಳು, ಸೇವಾ ಪ್ರಸಾದ ವಿತರಣೆ, ತೀರ್ಥ ಪ್ರಸಾದ ಮತ್ತು ಅನ್ನಸಂತರ್ಪಣೆಗಳು ಇರುವುದಿಲ್ಲ. ಅಲ್ಲದೇ ಆ ದಿನದಂದು ಹಾಲು, ಸೀಯಾಳ, ಹಣ್ಣುಕಾಯಿ ಮತ್ತಿತರ ಯಾವುದೇ ಪೂಜಾ ಸಾಮಾಗ್ರಿಗಳನ್ನು ಸ್ವೀಕರಿಸಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಅನುಕೂಲಕರ ಪರಿಸ್ಥಿತಿ ಉಂಟಾದಾಗ ಭಕ್ತಾದಿಗಳಿಗೆ ಸೇವೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗುವುದು” ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.