LATEST NEWS
ಪಿಎಸ್ಐ ಅಕ್ರಮ – ಪ್ರಿಯಾಂಕ ಖರ್ಗೆ ತನಿಖೆಗೆ ಸಚಿವ ಸುನಿಲ್ ಕುಮಾರ್ ಆಗ್ರಹ
ಉಡುಪಿ ಎಪ್ರಿಲ್ 25: ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಶಾಸಕ ಪ್ರಿಯಾಂಕ ಖರ್ಗೆ ಅವರನ್ನು ತನಿಖೆ ಒಳಪಡಿಸಬೇಕೆಂದು ಇಂದನ ಸಚಿವ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಪ್ರಿಯಾಂಕ ಖರ್ಗೆ ಅವರ ನಿಕಟವರ್ತಿಗಳು ಬಂಧಿತರಾಗಿದ್ದಾರೆ. ತನ್ನ ಮೇಲೆ ಬಂದಿರುವ ಆರೋಪಗಳನ್ನು ಅಲ್ಲಗಳೆಯಲು ಪ್ರಿಯಾಂಕ ಖರ್ಗೆ ಸಕ್ರಿಯರಾಗುತ್ತಿದ್ದಾರೆ. ಈ ಹಿನ್ನಲೆ ಕೂಡಲೇ ಪ್ರಿಯಾಂಕ ಖರ್ಗೆ ಅವರನ್ನ ತನಿಖೆಗೆ ಒಳಪಡಿಸಬೇಕು ಗೃಹ ಸಚಿವರಿಗೆ ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ.
ಈಗಾಗಲೇ ಬಂದಿತ ಇಬ್ಬರು ಆರೋಪಿಗಳು ಕಾಂಗ್ರೆಸ್ಸಿಗೆ ಸಂಬಂಧಪಟ್ಟವರು, ಬ್ಲಾಕ್ ಕಾಂಗ್ರೆಸ್ ಗೆ ಅಧ್ಯಕ್ಷರಾಗಿ ಕೆಲಸ ಮಾಡಿದವರು ಬಂಧನಕ್ಕೊಳಗಾಗಿದ್ದಾರೆ. ಇವರಿಗೆ ನಿಕಟವರ್ತಿಯಾಗಿ ಪ್ರಿಯಾಂಕ ಖರ್ಗೆ ಸಲಹೆ ನೀಡಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ. ಅಕ್ರಮ ನಡೆಯುತ್ತಿರುವಾಗಲೇ ಪ್ರಿಯಾಂಕ ಖರ್ಗೆ ಕೈಗೆ ಆಡಿಯೋ ಸಿಕ್ಕಿದೆ. ಇವರ ಕೈವಾಡ ಇಲ್ಲದೆ ಆಡಿಯೋ ಇವರ ಕೈಗೆ ಸಿಗಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆ ತಕ್ಷಣ ಪ್ರಿಯಾಂಕ ಖರ್ಗೆ ಅವರನ್ನು ವಿಚಾರಣೆಗೆ ಒಳಪಡಿಸಬೇಕು. ಪ್ರಿಯಾಂಕ ಖರ್ಗೆ ಯನ್ನು ಬಿಟ್ಟು ತನಿಖೆ ಪೂರ್ಣಗೊಳ್ಳಲು ಸಾಧ್ಯವಿಲ್ಲ.
ಅಲ್ಲದೆ ತನ್ನ ಮೇಲೆ ಪ್ರಕರಣದ ಆರೋಪ ಬರುತ್ತದೆ ಎಂದು ಗಮನ ಬೇರೆಡೆಗೆ ಸೆಳೆಯಲು ಖರ್ಗೆ ಪ್ರತಿನಿತ್ಯ ಪ್ರೆಸ್ ಕಾನ್ಫರೆನ್ಸ್ ಮಾಡುತ್ತಿದ್ದಾರೆ, ಈಗಾಗಲೇ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರ ಅಕ್ರಮ ಬಯಲಾಗುತ್ತಿದೆ, ಈ ಪ್ರಕರಣದಲ್ಲಿ ಸ್ವಯಂಪ್ರೇರಿತರಾಗಿ ಸಿಎಂ ಮತ್ತು ಗೃಹಸಚಿವರು ತನಿಖೆಗೆ ಆದೇಶಿಸಿದ್ದಾರೆ. ಯಾರನ್ನೂ ಕೂಡ ಈ ಪ್ರಕರಣದಲ್ಲಿ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.