LATEST NEWS
ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ದ ನಾಗರಿಕ ಹೋರಾಟ ಸಮಿತಿಯಿಂದ ಪ್ರತಿಭಟನೆ

ಮಂಗಳೂರು ಸೆಪ್ಟೆಂಬರ್ 07: ಪರಿಸರ ಮಾಲಿನ್ಯ ನಿಯಂತ್ರಿಸಲು ಕ್ರಮಕೈಗೊಳ್ಳಬೇಕಾದ ಮಾಲಿನ್ಯ ನಿಯಂತ್ರಣ ಮಂಡಳಿ ಬೃಹತ್ ಕೈಗಾರಿಕೆಗಳ ಅಕ್ರಮಗಳ ವಿರುದ್ದ ಯಾವುದೇ ಕ್ರಮ ಕೈಗೊಳ್ಳದೆ ಅಡಿಯಾಳಾಗಿ ಅಕ್ರಮ ಮುಚ್ಚಿ ಹಾಕುವ ಕೆಲಸ ಮಾಡುತ್ತಿದೆ ಎಂದು ನಾಗರಿಕ ಹೋರಾಟ ಸಮಿತಿ ಆರೋಪಿಸಿದೆ.
ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಂಭಾಗ ನಾಗರಿಕ ಹೋರಾಟ ಸಮಿತಿ ಜೊಕಟ್ಟೆ ಇಂದು ಅಣಕು ಶವಯಾತ್ರೆ, ಪ್ರತಿಕೃತಿ ದಹನ ಪ್ರತಿಭಟನೆ ನಡೆಸಿತು.

ಹಸಿರು ವಲಯ ನಿರ್ಮಿಸಲು ಹಿಂದೇಟು ಹಾಕುತ್ತಿರುವ ಎಮ್ಆರ್ ಪಿಎಲ್, ಗಂಭೀರ ಪರಿಸರ ಮಾಲಿನ್ಯ ಎಸಗುತ್ತಿರುವ ಅದಾನಿ ವಿಲ್ಮಾ, ರುಚಿಗೋಲ್ಡ್, ಯು ಬಿ ಬಿಯರ್ ಸಹಿತ ಬೃಹತ್ ಕೈಗಾರಿಕೆಗಳ ಮೇಲೆ ಕ್ರಮ ಕೈಗೊಳ್ಳದೆ, ಬೃಹತ್ ಕೈಗಾರಿಕೆಗಳ ಅಡಿಯಾಳಾಗಿ ಅಕ್ರಮಗಳನ್ನು ಮುಚ್ಚಿ ಹಾಕುವ ಕೆಲಸ ಮಾಡುತ್ತಿದೆ. ಇದರಿಂದಾಗಿ ಜೋಕಟ್ಟೆ, ಬಜ್ಪೆ, ಬೈಕಂಪಾಡಿ, ಸುರತ್ಕಲ್ ಮುಂತಾದ ಕೈಗಾರಿಕಾ ಬಾಹುಳ್ಯ ಪ್ರದೇಶಗಳು ಗಂಭೀರವಾದ ಕೈಗಾರಿಕಾ ಮಾಲಿನ್ಯಕ್ಕೆ ಗುರಿಯಾಗಿದ್ದು ಜನರ ಆರೋಗ್ಯಕ್ಕೆ ಕಂಟಕ ಎದುರಾಗಿದೆ ಎಂದು ಆರೋಪಿಸಿದರು.
ಸರಕಾರದ ಆದೇಶದ ಹೊರತಾಗಿಯು ಹಸಿರು ವಲಯ ನಿರ್ಮಾಣಕ್ಕಾಗಿ ಎಮ್ ಆರ್ ಪಿ ಎಲ್ 27 ಎಕರೆ ಭೂಸ್ವಾಧೀನಕ್ಕೆ ಸಹಕರಿಸುತ್ತಿಲ್ಲ. 33 ಶೇಕಡಾ ಜಮೀನಿನಲ್ಲಿ ಹಸಿರು ವಲಯ ನಿರ್ಮಿಸದಿರುವುದು ಕಂಪೆನಿಗೆ ಬೀಗ ಜಡಿಯುವ ಅಪರಾಧವಾದರೂ ಮಾಲಿನ್ಯ ನಿಯಂತ್ರಣ ಮಂಡಳಿ ಎಮ್ಅರ್ ಪಿಎಲ್ ಅಧಿಕಾರಿಗಳಿಗೆ ವಿಧೇಯವಾಗಿ ನಡೆದುಕೊಳ್ಳುತ್ತಿದೆ. ಗೌತಮ್ ಅದಾನಿಯ ವಿಲ್ಮಾ, ಬಾಬಾ ರಾಮ್ ದೇವ್ ಒಡೆತನದ ರುಚಿಗೋಲ್ಡ್ ಮತ್ತಿತರ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಬೃಹತ್ ಕಂಪೆನಿಗಳ ಮಾಲಿನ್ಯದಿಂದ ಪಲ್ಗುಣಿ ನದಿ ವಿಷಮಯಗೊಳ್ಳುತ್ತಿದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿ ಕಣ್ಣು ಮುಚ್ಚಿ ಕೂತಿದೆ. ಈ ಕುರಿತು ಹದಿನೈದು ದಿನಗಳ ಅಂತರದಲ್ಲಿ ಎರಡು ಬಾರಿ ಮಾಲಿನ್ಯ ನಿಯಂತ್ರಣ ಮಂಡಳಿ ಮುಂಭಾಗ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಖೇದಕರ. ಇಂತಹ ಹೊಣೆಗೇಡಿತನದ ವಿರುದ್ದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ಮುನೀರ್ ಕಾಟಿಪಳ್ಳ ಹೇಳಿದರು.