Connect with us

    DAKSHINA KANNADA

    ಕಸ್ತೂರಿ ರಂಗನ್ ವರದಿ ಜಾರಿಗೆ ಕರಾವಳಿಯಲ್ಲಿ ಭಾರಿ ವಿರೋಧ – ಸರಕಾರಕ್ಕೆ ರಕ್ತಪಾತದ ಎಚ್ಚರಿಕೆ ನೀಡಿದ ಶಾಸಕ ಗುರುರಾಜ್ ಗಂಟಿಹೊಳೆ

    ಪುತ್ತೂರು ನವೆಂಬರ್ 15: ಕಸ್ತೂರಿ ರಂಗನ್ ವರದಿ ವಿರೋಧಿಸಿ ಹೋರಾಟ ತೀವ್ರಗೊಂಡಿದೆ, ಗುಂಡ್ಯದಲ್ಲಿ ಕಸ್ತೂರಿ ರಂಗನ್ ವಿರೋಧಿ ಪ್ರತಿಭಟನೆ ನಡೆದಿದೆ. ಅರಣ್ಯದ ಒಳಗೆ ಅರಣ್ಯದ ನೋವು ತಿಂದವರು ಅರಣ್ಯ ಸಚಿವರಾಗಬೇಕು, ಅರಣ್ಯದ ಸಮಸ್ಯೆಯನ್ನು ತಿಳಿಯದ ವ್ಯಕ್ತಿ ಅರಣ್ಯ ಸಚಿವರಾಗಬಾರದು ಎಂದು ಸಕಲೇಶಪುರ ಶಾಸಕ ಮಂಜು ಹೇಳಿದ್ದಾರೆ.

    ಗುಂಡ್ಯದಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಕಸ್ತೂರಿ ರಂಗನ್ ವರದಿ ಮಲೆನಾಡಿನ ಜನರಿಗೆ ಕರಾಳ ನಿಯಮ, ಅರಣ್ಯ ಸಚಿವ ಈಶ್ವರ ಖಂಡ್ರೆ ಈ ಬಗ್ಗೆ ಸಭೆ ಕರೆದಿದ್ದರು. ಆ ಸಭೆಯಲ್ಲಿ ಮಲೆನಾಡಿನ, ಕರಾವಳಿಯ ಎಲ್ಲಾ ಶಾಸಕರು ವಿರೋಧಿಸಿದ್ದೇವೆ. ಕಸ್ತೂರಿ ರಂಗನ್ ವರದಿಯನ್ನು ಮಾರ್ಪಾಡು ಮಾಡುವುದಲ್ಲ, ಅದನ್ನು ಸಂಪೂರ್ಣ ರಿಜೆಕ್ಟ್ ಮಾಡಬೇಕು ಎಂದಿದ್ದೇವೆ ಎಂದರು. ಮಲೆನಾಡಿನ ಜನ ಅರಣ್ಯವನ್ನು ಸಂರಕ್ಷಿಸುತ್ತಾ ಬಂದಿದ್ದಾರೆ. ಅರಣ್ಯ ರಕ್ಷಿಸಬೇಕಾದರೆ ಬೆಂಗಳೂರಿನಲ್ಲಿ ಅರಣ್ಯ ಬೆಳೆಸಿಲಿ, ರಾಜ್ಯದ ಹಲವು ಕಡೆ ಸಾವಿರಾರು ಎಕರೆ ಜಾಗದಲ್ಲಿ ಸೋಲಾರ್ ಪ್ಲಾಂಟ್ ಮಾಡಿದ್ದಾರೆ ಆಗ ಜಾಗದಲ್ಲಿ ಬೇಕಾದರೆ ಅರಣ್ಯ ಬೆಳಸಲಿ ಎಂದರು. ಅರಣ್ಯ ಇಲಾಖೆ ಕೃಷಿಕರ ಮೇಲೆ ದಬ್ಬಾಳಿಕೆ ಮಾಡಲು ಇರೋದಲ್ಲ, ಕೃಷಿಕರನ್ನು ಕಾವಲು ಕಾಯಲು ಇರುವವರು ಎಂದು ನೆನಪಿಡಿ, ಒಂದು ವೇಳೆ ಕಸ್ತೂರಿ ರಂಗನ್ ವರದಿ ಜಾರಿಯಾದರೆ, ಇಂದು ಅಡಿ ಭೂಮಿಯೂ ರೈತನಿಗೆ ಸಿಗಲ್ಲ ಎಂದು ಶಾಸಕ ಮಂಜು ಹೇಳಿದರು.

    ಇನ್ನು ಈ ವೇಳೆ ಮಾತನಾಡಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೋಳೆ ಭಾದಿತ ಪ್ರದೇಶದಲ್ಲಿ ಸರಕಾರದ ಸಮಿತಿ ರಚಿಸಬೇಕು, ಈ ಸಮಿತಿ ಪ್ರತೀ ಮನೆಗೆ ತೆರಳಿ ಮ್ಯಾನ್ಯುವಲ್ ಸರ್ವೆ ಆಗಬೇಕು, ಈ ಸರ್ವೆ ಆಗದೇ ಹೋದಲ್ಲಿ ರಕ್ತಸಿಕ್ತ ಅಧ್ಯಾಯ ಆರಂಭವಾಗಲಿದೆ ಎಂದು ಎಚ್ಚರಿಕೆ ನೀಡಿದು.


    ಈ ವರದಿಯನ್ನು ವಿರೋಧಿಸದೇ ಇದ್ದಲ್ಲಿ ಮುಂದೆ ನಮ್ಮ ಭವಿಷ್ಯಕ್ಕೇ ಮಾರಕ, ಈ ಹೋರಾಟವನ್ನು ತೀವ್ರಗೊಳಿಸಬೇಕು. ಕಾನೂನು ರೀತಿಯಲ್ಲಿ ಹೋರಾಟ ಮಾಡುವ ಅನಿವಾರ್ಯತೆಯಿದೆ. ಅರಣ್ಯ ಸಂರಕ್ಷಿಸುವ ನಿಟ್ಟಿನಲ್ಲಿ ಈ ಹಿಂದೆ ಸರಕಾರಗಳು ಅಂತರರಾಷ್ಟ್ರೀಯ ಫಂಡ್ ಪಡೆದಿದೆ. ಈ ಕಾರಣಕ್ಕಾಗಿಯೇ ದೇಶದೆಲ್ಲೆಡೆ ಡೀಮ್ಡ್ ಫಾರೆಸ್ಟ್ ಬೆಳೆಸುವಂತೆ ಕೇಂದ್ರ ರಾಜ್ಯಗಳಿಗೆ ಸೂಚಿಸಿತ್ತು. ಈ ಕಾರಣಕ್ಕಾಗಿ ರಾಜ್ಯ ಸರಕಾರಗಳು ಅಲ್ಲಲ್ಲಿ ಡೀಮ್ಡ್ ಫಾರೆಸ್ಟ್ ಮಾಡಲು ನಿರ್ಧರಿಸಿದೆ. ಈ ಕುರಿತು ಕಾಗದ ಪತ್ರಗಳೂ ಸಿದ್ಧವಾಗಿದೆ. ಈ ಕಾರಣಕ್ಕಾಗಿ ಕಾನೂನು ಹೋರಾಟದ ಅನಿವಾರ್ಯತೆಯೂ ಇದೆ ಎಂದರು.

    ಬಳಿಕ ಪ್ರತಿಭಟನಾಕಾರರು ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಎಲ್ಲಾ ಧಾರ್ಮಿಕ ಮುಖಂಡರು, ಎಲ್ಲಾ ಪಕ್ಷಗಳ ಜನ ಪ್ರತಿನಿಧಿಗಳು ಭಾಗವಹಿಸಿದ್ದು, ಧರ್ಮಾತೀತ ಮತ್ತು ಪಕ್ಷಾತೀತವಾಗಿ ಹೋರಾಟವನ್ನು ಗುರಿಮುಟ್ಟಿಸಲು ತೀರ್ಮಾನಿಸಲಾಗಿದೆ. ಕಸ್ತೂರಿ ರಂಗನ್ ವರದಿ ಕಾಡಿನಂಚಿನ ಗ್ರಾಮಗಳಿಗೆ ಮರಣ ಶಾಸನವಾಗಿದ್ದು, ಈ ವರದಿಯನ್ನು ಹಿಂಪಡೆಯದಿದ್ದಲ್ಲಿ, ರಕ್ತಸಿಕ್ತ ಅಧ್ಯಾಯಗಳೂ ಪ್ರಾರಂಭಗೊಳ್ಳಲಿದೆ ಎನ್ನುವ ಎಚ್ಚರಿಕೆಯನ್ನೂ ಬಾಧಿತ ಪ್ರದೇಶದ ಜನ ನೀಡಿದ್ದಾರೆ. ಉಡುಪಿ,ಮಲೆನಾಡು ಮತ್ತು ದಕ್ಷಿಣಕನ್ನಡ ಜಿಲ್ಲೆಯ ವರದಿಯಿಂದ ಬಾಧಿತವಾಗುವ ಪ್ರದೇಶಗಳ ಜನ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದ ಹಿನ್ನಲೆಯಲ್ಲಿ ಕಿಲೋಮೀಟರ್ ಉದ್ದಕ್ಕೂ ವಾಹಮ ಸಂಚಾರ ಸ್ತಬ್ದಗೊಂಡಿತ್ತು. ಈ ಕಾರಣಕ್ಕಾಗಿ ಪ್ರಯಾಣಿಕರು ಮತ್ತು ಪ್ರತಿಭಟನಾಕಾರರ ಮಧ್ಯೆ ಕೊಂಚ ಮಟ್ಟಿನ ವಾಕ್ಸಮರವೂ ನಡೆಯಿತು. ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹೊಪಾತ್ರ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

     

    Share Information
    Advertisement
    Click to comment

    Leave a Reply

    Your email address will not be published. Required fields are marked *