LATEST NEWS
ಮಂಗಳೂರು ಮಹಾನಗರಪಾಲಿಕೆ ನೌಕರರ ಪ್ರತಿಭಟನೆ – ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ ಶಾಸಕ ಕಾಮತ್

ಮಂಗಳೂರು ಜುಲೈ 11: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳೂರಿನ ಎಸ್.ಕೆ. ಮುನ್ಸಿಪಲ್ ಎಂಪ್ಲಾಯಿಸ್ ಯೂನಿಯನ್ ನೇತೃತ್ವದಲ್ಲಿ ಪಾಲಿಕೆ ನೌಕರರು ಮಂಗಳೂರು ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರವೂ ಮುಂದುವರಿಸಿದ್ದಾರೆ. ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಶಾಸಕ ವೇದವ್ಯಾಸ ಕಾಮತ್ ರವರು ಭೇಟಿ ನೀಡಿದರು.
ಪ್ರತಿಭಟನಾಕಾರರ ಬೇಡಿಕೆ ಹಾಗೂ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಸ್ಥಳದಲ್ಲಿಯೇ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಾದ ಹಿರಿಯ ಐಎಎಸ್ ಅಧಿಕಾರಿ ದೀಪಾ ಚೋಳನ್ ರವರಿಗೆ ಕರೆಮಾಡಿ, ಇಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಮಂಗಳೂರು ಜನತೆಗೆ ತೀವ್ರ ತೊಂದರೆಯಾಗುತ್ತಿದೆ. ಅವರ ನ್ಯಾಯಯುತ ಬೇಡಿಕೆಗಳನ್ನು ಕಡೆಗಣಿಸುವ ಬದಲು ಬಗೆಹರಿಸುವ ನಿಟ್ಟಿನಲ್ಲಿ ಕೂಡಲೇ ಸಭೆ ಕರೆಯಿರಿ ಎಂದು ಮನವಿ ಮಾಡಿದರು. ಶಾಸಕರ ಸಲಹೆಯ ಮೇರೆಗೆ ಕಾರ್ಯದರ್ಶಿಗಳು ಬೆಂಗಳೂರಿನಲ್ಲಿಯೂ ಪ್ರತಿಭಟನೆ ನಡೆಯುತ್ತಿದ್ದು ಇಲ್ಲಿನ ಪ್ರಮುಖರೊಂದಿಗೆ ಶುಕ್ರವಾರ ಮಧ್ಯಾಹ್ನವೇ ಸಭೆ ನಡೆಸುತ್ತೇವೆಂದು ತಿಳಿಸಿದರು.

ಶಾಸಕರು ಅದನ್ನು ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿ, ಪ್ರತಿಭಟನೆ ನಿಮ್ಮ ಸಂವಿಧಾನಬದ್ಧ ಹಕ್ಕು, ಅದಕ್ಕೆ ಅಭ್ಯಂತರವಿಲ್ಲ. ಆದರೆ ನಗರದಲ್ಲಿ ಕಸ ವಿಲೇವಾರಿ ಸೇರಿದಂತೆ ಅನೇಕ ಕೆಲಸಗಳು ಸ್ಥಗಿತಗೊಂಡ ಪರಿಣಾಮ ಸಮಸ್ಯೆಯಾಗಿದೆ. ಮಂಗಳೂರಿನ ಜನತೆಗೆ ನಿಮ್ಮ ಸೇವೆ ಅತ್ಯಂತ ಅಗತ್ಯವಾಗಿದ್ದು ಯಾರಿಗೂ ತೊಂದರೆಯಾಗದಂತೆ ದಯವಿಟ್ಟು ಸಹಕರಿಸಿ. ನಿಮ್ಮ ಎಲ್ಲಾ ಕಷ್ಟಗಳನ್ನು ಖಂಡಿತವಾಗಿಯೂ ಮುಂಬರುವ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತೇನೆ. ಗ್ಯಾರಂಟಿಯಿಂದಾಗಿ ಈಗಾಗಲೇ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ ಎಂದು ಸ್ವತಃ ಆಡಳಿತ ಪಕ್ಷದವರೇ ಹೇಳುತ್ತಿದ್ದಾರೆ. ಹಾಗಿರುವಾಗ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೂ ನಾನಂತೂ ನಿಮ್ಮ ಪರವಾಗಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.