DAKSHINA KANNADA
ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯ ಪ್ರಕರಣ – ಪ್ರಕರಣ ದಾಖಲಿಸಲು ಆಗ್ರಹಿಸಿ ಸಂತ್ರಸ್ತರು ಹಾಗು ನೀತಿ ತಂಡದಿಂದ ಉಪವಾಸ ಸತ್ಯಾಗ್ರಹ
ಪುತ್ತೂರು ಮಾರ್ಚ್ 15: ಮರಗಳ್ಳರ ಬಗ್ಗೆ ಹಿರಿಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಕ್ಕೆ ದೂರು ನೀಡಿದವರ ಮನೆ ಮೇಲೆ ಮಧ್ಯರಾತ್ರಿ ದಾಳಿ ನಡೆಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದ ಪೊಲೀಸರ ವಿರುದ್ದ ಸಂತ್ರಸ್ತ ಮನೆಮಂದಿ ಹಾಗೂ ನೀತಿ ತಂಡ ಕಡಬ ತಹಶಿಲ್ದಾರ್ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೈಗೊಂಡಿದೆ.
ಮರಗಳ್ಳತನದ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಕ್ಕೆ ಸಿಟ್ಟುಗೊಂಡ ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳು ಮಧ್ಯರಾತ್ರಿ ಐತೂರು ನಿವಾಸಿ ಪ್ರಸಾದ್ ಎಂಬವರ ಮನೆ ಮೇಲೆ ದಾಳಿ ನಡೆಸಿ ದೌರ್ಜನ್ಯ ವೆಸಗಿದ್ದಾರೆ ಎಂದು ಆರೋಪಿಸಲಾಗಿದ್ದು, ಅಲ್ಲದೆ ಮನೆ ಮೇಲ್ಛಾವಣಿಗೆ ಹಾಕಿದ್ದ 30 ವರ್ಷ ಹಳೆಯ ಮರದ ಹಲಗೆ ಸೀಝ್ ಮಾಡಿ ಮನೆಯಲ್ಲಿದ್ದ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿನ್ನಲೆ ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯದ ಕುರಿತು ಅಧಿಕಾರಿಗಳ ವಿರುದ್ಧ ಸಂತ್ರಸ್ಥರು ಕಡಬ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು, ಆದರೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ದೂರು ದಾಖಲು ಮಾಡಲು ಕಡಬ ಪೊಲೀಸರು ಹಿಂದೇಟು ಹಾಕಿದ್ದಾರೆ. ಈ ಹಿನ್ನಲೆ ಸಂತ್ರಸ್ತ ಮನೆವರು ದೂರು ದಾಖಲಿಸಲು ಆಗ್ರಹಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.