BELTHANGADI
ಎಂಡೋಪೀಡಿತ ಮಕ್ಕಳಿಂದ ಕೆಲಸ ಮಾಡಿಸುತ್ತಿರುವ ಎಂಡೋಪಾಲನಾ ಕೇಂದ್ರ – ಪೋಷಕರಿಂದ ಪ್ರತಿಭಟನೆ
ಎಂಡೋಪೀಡಿತ ಮಕ್ಕಳಿಂದ ಕೆಲಸ ಮಾಡಿಸುತ್ತಿರುವ ಎಂಡೋಪಾಲನಾ ಕೇಂದ್ರ – ಪೋಷಕರಿಂದ ಪ್ರತಿಭಟನೆ
ಬೆಳ್ತಂಗಡಿ ಅಗಸ್ಟ್ 3:ಎಂಡೋ ಪೀಡಿತರಾಗಿ ತಮ್ಮ ಕೆಲಸವನ್ನು ಮಾಡಲಾಗದ ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಲಾಗುತ್ತಿದ್ದು ಅಲ್ಲದೆ ಎಂಡೋ ಸಂತ್ರಸ್ತ ಮಕ್ಕಳನ್ನು ಪಾಲನಾ ಕೇಂದ್ರದಲ್ಲಿ ಅತ್ಯಂತ ಕೆಟ್ಟದಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಎಂಡೋ ಸಂತ್ರಸ್ತ ಪೋಷಕರು ಪಾಲನಾ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.
ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿರುವ ಎಂಡೋ ಪಾಲನಾ ಕೇಂದ್ರವನ್ನು ಕಳೆದ ಒಂದು ತಿಂಗಳಿನಿಂದ ಎನ್.ಜಿ.ಒ ಒಂದು ವಹಿಸಿಕೊಂಡಿದ್ದು, ಈ ಸಂಸ್ಥೆಯು ಪಾಲನಾ ಕೇಂದ್ರವನ್ನು ವಹಿಸಿದ ಬಳಿಕ ಕೇಂದ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪಾಲನಾ ಕೇಂದ್ರಕ್ಕೆ ಬರುವ ಮಕ್ಕಳಿಗೆ ಸರಿಯಾಗಿ ಊಟವನ್ನು ನೀಡಲಾಗುತ್ತಿಲ್ಲ.
ಅಲ್ಲದೆ ಎಂಡೋ ಸಂತ್ರಸ್ತ ಮಕ್ಕಳಲ್ಲಿ ನೆಲ ಒರೆಸುವ, ಕಸ ಗುಡಿಸುವ, ಪ್ಲೇಟ್ ತೊಳೆಯುವ, ಶೌಚಾಲಯ ತೊಳೆಯುವ ಕೆಲಸಗಳನ್ನು ಮಾಡಲಾತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಮಕ್ಕಳ ಮೇಲೆ ತಮ್ಮ ಶೋಷಣೆ ಮರೆ ಮಾಚಲು ಎಂಡೋ ಪಾಲನಾ ಕೇಂದ್ರದಲ್ಲಿದ್ದ ಸಿಸಿ ಕ್ಯಾಮರಾವನ್ನೂ ತೆಗೆಯಲಾಗಿದೆ. ಮಕ್ಕಳನ್ನು ನೋಡಲು ಪೋಷಕರು ಕೂಡಾ ಪಾಲನಾ ಕೇಂದ್ರಕ್ಕೆ ಹೋಗದಂತೆ ತಡೆಹಿಡಿಯಲಾಗಿದೆ ಎಂದು ಪಾಲಕರು ಆರೋಪಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಗಮಿಸಿ ಎಂಡೋ ಸಂತ್ರಸ್ತ ಮಕ್ಕಳ ಅಹವಾಲನ್ನು ಆಲಿಸಿದರಲ್ಲದೆ, ಇದೀಗ ಪಾಲನಾ ಕೇಂದ್ರವನ್ನು ನಡೆಸುತ್ತಿರುವ ಸಂಸ್ಥೆಯ ವಿರುದ್ಧ ಸರಕಾರಕ್ಕೆ ದೂರು ನೀಡುವುದಾಗಿಯೂ ಹೇಳಿದರು.
ಒಂದು ವಾರದ ಒಳಗೆ ಪಾಲನಾ ಕೇಂದ್ರದಲ್ಲಿ ನಡೆಯುತ್ತಿರುವ ವಿಚಾರಗಳ ಬಗ್ಗೆಯೂ ವರದಿ ನೀಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೂ ಶಾಸಕರು ಸೂಚನೆ ನೀಡಿದ್ದಾರೆ.
ಎಂಡೋ ಸಂತ್ರಸ್ತರ ನಿರಂತರ ಹೋರಾಟದ ಫಲವಾಗಿ ಸರಕಾರ ಕೊಕ್ಕಡ ಹಾಗೂ ಅಲಂಕಾರು ಎಂಬಲ್ಲಿ ಎಂಡೋ ಪಾಲನಾ ಕೇಂದ್ರವನ್ನು ಸ್ಥಾಪಿಸಿದೆ. ಪಾಲನಾ ಕೇಂದ್ರವನ್ನು ನಿರ್ವಹಿಸಲು ಎನ್.ಜಿ.ಒ ಗಳಿಗೆ ಬಿಟ್ಟು ಕೊಟ್ಟ ಬಳಿಕ ಈ ರೀತಿಯ ಗೊಂದಲವು ಹೆಚ್ಚಾಗಲಾರಂಭಿಸಿದೆ.