LATEST NEWS
ಕಾಫಿ ಡೇ ಮಾಲಿಕ ಸಿದ್ದಾರ್ಥ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ತನಿಖಾಧಿಕಾರಿಗೆ ಸಲ್ಲಿಕೆ

ಕಾಫಿ ಡೇ ಮಾಲಿಕ ಸಿದ್ದಾರ್ಥ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ತನಿಖಾಧಿಕಾರಿಗೆ ಸಲ್ಲಿಕೆ
ಮಂಗಳೂರು ಅಗಸ್ಟ್ 2: ಕಾಫಿ ಡೇ ನಿರ್ದೇಶಕ, ಕಾಫಿ ಕಿಂಗ್ ಸಿದ್ದಾರ್ಥ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯನ್ನು ವೆನ್ಲಾಕ್ ಆಸ್ಪತ್ರೆಯ ವೈದ್ಯರು ಪ್ರಕರಣದ ತನಿಖಾಧಿಕಾರಿಯವರಿಗೆ ಸಲ್ಲಿಸಿದ್ದಾರೆ.
ಕಫೆ ಕಾಫಿಡೇ ಸಂಸ್ಥಾಪಕ ಕಾಫಿ ಕಿಂಗ್ ಸಿದ್ದಾರ್ಧ ಅವರು ಜುಲೈ 29 ರಂದು ಮಂಗಳೂರಿನ ನೇತ್ರಾವತಿ ನದಿ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದರು. ನಂತರ ಜುಲೈ 31 ರ ಮುಂಜಾನೆ ಸಂದರ್ಭ ಸಿದ್ದಾರ್ಥ ಅವರ ಮೃತ ದೇಹ ಮಂಗಳೂರಿನ ಹೊಯ್ಗೆ ಬಜಾರ್ ಸಮೀಪದ ಕಡಲ ಕಿನಾರೆಯಲ್ಲಿ ಪತ್ತೆಯಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಕೋದಂಡರಾಮ್ ಅವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದರು.
ಸಿದ್ದಾರ್ಥ ಅವರ ಮೃತ ದೇಹವನ್ನು ಮಂಗಳೂರು ಉಪ ವಿಭಾಗಾಧಿಕಾರಿ ರವಿಚಂದ್ರ ನಾಯಕ್ ಸಮ್ಮುಖದಲ್ಲಿ ವಿಧಿ ವಿಜ್ಞಾನ ವಿಭಾಗದ ಒಬ್ಬ ಪ್ರಾಧ್ಯಾಪಕ ಮತ್ತು ಒಬ್ಬ ಹಿರಿಯ ತಜ್ಞರು ಮರಣೋತ್ತರ ಪರೀಕ್ಷೆ ನಡೆಸಿದ್ದರು.
ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ದೇಹ ಇದ್ದ ಸ್ಥಿತಿ ಮತ್ತು ಪರೀಕ್ಷೆಯ ಸಮಯದಲ್ಲಿ ತಜ್ಞರು ಕಂಡ ವಿಷಯಗಳನ್ನು ಆಧರಿಸಿ ಪ್ರಾಥಮಿಕ ವರದಿಯನ್ನು ತನಿಖಾಧಿಕಾರಿ ದಕ್ಷಿಣ ಉಪ ವಿಭಾಗದ ಎಸಿಪಿ ಕೋದಂಡರಾಮ್ ಅವರಿಗೆ ಸಲ್ಲಿಸಿದ್ದಾರೆ.
ಅಲ್ಲದೆ ಮರಣೋತ್ತರ ಪರೀಕ್ಷೆ ಸಂದರ್ಭ ಮೃತದೇಹದ ವಿವಿಧ ಭಾಗಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅವುಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಸಂಗ್ರಹಿಸಿರುವ ಮಾದರಿಗಳ ಪರೀಕ್ಷೆಯ ವರದಿ ಲಭ್ಯವಾದ ಬಳಿಕ ಅಂತಿಮ ವರದಿ ಸಲ್ಲಿಕೆಯಾಗಲಿದೆ.