DAKSHINA KANNADA
ಮ್ಯಾನ್ ಹೋಲ್ ಒಳಗೆ ಕಾರ್ಮಿಕರ ಇಳಿಸಿ ಅನಾಗರಿಕ ವರ್ತನೆ, ಪಾಲಿಕೆ ವಿರುದ್ಧ ಸಿಪಿಐಎಂ ಪ್ರತಿಭಟನೆ
ಮ್ಯಾನ್ ಹೋಲ್ ಒಳಗೆ ಕಾರ್ಮಿಕರ ಇಳಿಸಿ ಅನಾಗರಿಕ ವರ್ತನೆ, ಪಾಲಿಕೆ ವಿರುದ್ಧ ಸಿಪಿಐಎಂ ಪ್ರತಿಭಟನೆ
ಮಂಗಳೂರು, ಅಕ್ಟೋಬರ್ 21: ಮ್ಯಾನ್ ಹೋಲ್ ಒಳಗೆ ಪೌರಕಾರ್ಮಿಕರನ್ನು ಇಳಿಸುವ ಮೂಲಕ ಅನಾಗರಿಕ ವರ್ತನೆ ತೋರಿದ ಮಂಗಳೂರು ಮಹಾನಗರ ಪಾಲಿಕೆ ವಿರುದ್ಧ ಸಿಪಿಐಎಂ ಪಕ್ಷ ಪ್ರತಿಭಟನೆ ನಡೆಸಿತು. ಮಹಾನಗರ ಪಾಲಿಕೆ ಮುಂಭಾಗದಲ್ಲಿ ಸೇರಿದ ಪ್ರತಿಭಟನಾಕಾರರು ಅಧಿಕಾರಿಗಳು ಹಾಗೂ ಮೇಯರ್ ವಿರುದ್ಧ ಘೋಷಣೆಯನ್ನು ಕೂಗಿದರು. ಚರಂಡಿಯ ದುರಸ್ಥಿಗೆ ಪೌರ ಕಾರ್ಮಿಕರ ಅನಿವಾರ್ಯತೆಯಿದ್ದ ಸಂದರ್ಭದಲ್ಲಿ ಚರಂಡಿಯೊಳಗಿನ ನೀರನ್ನು ಸಂಪೂರ್ಣ ಬತ್ತಿಸಿ , ಮುಂಜಾಗೃತಾ ಕ್ರಮ ಕೈಗೊಳ್ಳಬೇಕೆಂಬ ನಿಯಮವಿದೆ. ಆದರೆ ಇಲ್ಲಿ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಲಾಗಿದೆ ಎಂದು ಸಿಪಿಐಎಂ ಮುಖಂಡ ಸುನಿಲ್ ಕುಮಾರ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದರು. ಮೇಯರ್ ಮೇಡಮ್ ಫೋಸ್ ಕೊಡುವುದನ್ನು ಬಿಟ್ಟು, ಇಂಥ ಕೆಲಸಗಳನ್ನು ಮಾಡಿಸುವ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪೌರ ಕಾರ್ಮಿಕರನ್ನು ಈ ರೀತಿಯಾಗಿ ಕಾನೂನುಬಾಹಿರವಾಗಿ ದುಡಿಸಿಕೊಂಡ ಮೇಯರ್ ಹಾಗೂ ಪಾಲಿಕೆಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗುವುದು ಎಂದೂ ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು. ಸಿಪಿಐಎಂ ಪಕ್ಷದ ಮುಖಂಡರು ಹಾಗೂ ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.