DAKSHINA KANNADA
ಕುರಾನ್ ಗೆ ಅವಮಾನ ಖಂಡಿಸಿ ಅಕ್ಟೋಬರ್ 13 ಕ್ಕೆ ಪ್ರತಿಭಟನೆ-ಮುಸ್ಲಿಂ ಒಕ್ಕೂಟ
ಕುರಾನ್ ಗೆ ಅವಮಾನ ಖಂಡಿಸಿ ಅಕ್ಟೋಬರ್ 13 ಕ್ಕೆ ಪ್ರತಿಭಟನೆ-ಮುಸ್ಲಿಂ ಒಕ್ಕೂಟ
ಮಂಗಳೂರು,ಅಕ್ಟೋಬರ್ 11:ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಆರೋಪಿಯ ಮನೆಯಲ್ಲಿ ಶೋಧ ನಡೆಸುವ ಸಂದರ್ಭ ಕುರಾನ್ ಗ್ರಂಥಕ್ಕೆ ಅವಮಾನ ಮಾಡಿದ ಪೋಲೀಸ್ ವಿರುದ್ಧ ಕ್ರಮಕ್ಕೆ ದಕ್ಷಿಣಕನ್ನಡ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ಈ ಸಂಬಂಧ ಅಕ್ಟೋಬರ್ 13 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಪ್ರತಿಭಟನಾ ಸಭೆ ನಡೆಸಲು ಒಕ್ಕೂಟ ನಿರ್ಧರಿಸಿದೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಶರತ್ ಮಡಿವಾಳ ಕೊಲೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಬಂಟ್ವಾಳ ತಾಲೂಕಿನ ಸಜಿಪಮುಡ್ನೂರು ನಿವಾಸಿ ಕಲಂದರ್ ಮನೆಗೆ ಬಂಟ್ವಾಳ ಪೋಲೀಸರು ತನಿಖೆಗಾಗಿ ತೆರಳಿದ್ದರು. ಈ ಸಂಬಂಧ ಕೆಲವು ದಾಖಲೆ ಪತ್ರಗಳನ್ನು ಹುಡುಕುವ ಸಂದರ್ಭದಲ್ಲಿ ಮನೆಯ ಕಪಾಟಿನಲ್ಲಿದ್ದ ಬಟ್ಟೆ ಬರೆಗಳನ್ನು ಹಾಗೂ ಕೆಲವು ಕಾಗದಪತ್ರಗಳನ್ನು ಕಪಾಟಿನಿಂದ ಕೆಳಗೆ ಎಸೆದಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದ ಕುರಾನ್ ಗ್ರಂಥವನ್ನೂ ನೆಲಕ್ಕೆ ಎಸೆದಿದ್ದಾರೆ ಎಂದು ಕಲಂದರ್ ಕುಟುಂಬ ಆರೋಪಿಸಿದೆ. ಈ ಹಿನ್ನಲೆಯಲ್ಲಿ ಪೋಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒಕ್ಕೂಟ ಈ ಹಿಂದೆಯೇ ಹಿರಿಯ ಪೋಲೀಸ್ ಅಧಿಕಾರಿಗಳು ಹಾಗೂ ಗೃಹಸಚಿವರನ್ನು ಭೇಟಿ ಮಾಡಿ ಮನವಿ ಮಾಡಿತ್ತು. ಆದರೆ ಒಕ್ಕೂಟದ ಯಾವುದೇ ಮನವಿಗೆ ಸ್ಪಂದಿಸದ ಹಿನ್ನಲೆಯಲ್ಲಿ ಈ ಪ್ರತಿಭಟನಾ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.