Connect with us

LATEST NEWS

ಓ ಮನುಜ ನೀನೇಕೆ ಇಷ್ಟು ಕ್ರೂರಿ……ಗರ್ಭಿಣಿ ಆನೆಯನ್ನು ಪಟಾಕಿ ಇಟ್ಟು ಕೊಂದ ಪಾಪಿಗಳು

ಪೈನಾಫಲ್ ಹಣ್ಣಿನಲ್ಲಿ ಪಟಾಕಿ ಇಟ್ಟು ಕೊಲೆ ಮಾಡಿದ ಕಿರಾತಕರು

ತಿರುವನಂತರಪುರಂ: ಮನುಷ್ಯನ ವಿಕೃತಿಗಳು ಎಷ್ಟು ಹೀನ ಅನ್ನೋದಕ್ಕೆ ಇದಕ್ಕಿಂತ ಒಳ್ಳೆ ಉದಾಹರಣೆ ಬೇಕಿಲ್ಲ. ಇದು ಕೇರಳದ ಮಲಪ್ಪುರಂ ನಲ್ಲಿ ನಡೆದ ಘಟನೆ. ಕಾಡಿನಿಂದ ನಾಡಿಗೆ ಬಂದ ಗರ್ಭಿಣಿ ಆನೆಗೆ ವಿಷ ಉಣಿಸಿ ಸಾಯಿಸಿದ ಕ್ರೂರ ಸುದ್ದಿ ಇದು. ಹೇಳಿ ಕೇಳಿ ಕೇರಳದ ಸಾಂಸ್ಕೃತಿಕ ಪರಂಪರೆ ಬಗ್ಗೆ ನೋಡಿದ್ರೆ ಅಲ್ಲಿ ಆನೆಗೊಂದು ವಿಶಿಷ್ಟ ಸ್ಥಾನವಿದೆ. ಪ್ರತೀ ದೇವಸ್ಥಾನಗಳಲ್ಲಿ ಆನೆಗೆ ಭಕ್ತಿಯ ನಮನವಿದೆ. ಆನೆಗೆಂದೇ ಆನತ್ತಾವಳವಿದೆ. ಗುರುವಾಯೂರು ತ್ರಿಶ್ಶೂರು ಮುಂತಾದೆಡೆ ಆನೆಗಳೇ ಧಾರ್ಮಿಕ ಉತ್ಸವದ ಮುಂಚೂಣಿಯಲ್ಲಿ ನಿಲ್ಲುತ್ತವೆ.

ಅಂತಹ ನಾಡಿನಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಹೆರಿಗೆ ಆಗಲಿದ್ದ ಹೆಣ್ಣು ಆನೆಗೆ ಸುಡುಮದ್ದು ಸ್ಪೋಟಕ ತುಂಬಿದ ಪೈನಾಪಲ್ ನೀಡಿದ್ರು. ಆನೆ ಬಾಯೊಳಗಿಟ್ಟು ಜಗಿಯುತ್ತಿದ್ದಂತೆ ಪೈನಾಪಲ್ ಒಳಗಿದ್ದ ಪಟಾಕಿ ಹೊಡೆದು ಬಾಯಿ ತುಂಬಾ ಗಾಯಗಳಾಗಿದೆ. ನೋವು ಸಹಿಸಲಾಗದೆ ಆನೆ ಊರೆಲ್ಲಾ ಓಡಾಡಿ ಒಂದು ನದಿ ಸೇರಿ ಅಲ್ಲೇ ನಿಂತು ಪ್ರಾಣಬಿಟ್ಟಿದೆ.

ನಡೆದ ಘಟನೆ ವಿವರ

ಗರ್ಭಿಣಿ ಆನೆಯೊಂದು ಆಹಾರ ಹುಡುಕಿಕೊಂಡು ಗ್ರಾಮಕ್ಕೆ ತೆರಳಿತ್ತು. ಆದರೆ ಯಾರಿಗೂ ತೊಂದರೆ ಕೊಡದೆ ದಾರಿಯಲ್ಲಿ ಓಡಾಡುತ್ತಿರುವಾಗ ಕೆಲ ಗ್ರಾಮಸ್ಥರು ಪಟಾಕಿ ತುಂಬಿದ ಪೈನಾಪಲ್‍ನ್ನು ಆನೆಗೆ ನೀಡಿದ್ದಾರೆ. ಆಹಾರದ ಆಸೆಯಲ್ಲಿ ಆನೆ ಅದನ್ನು ತಿಂದಿದೆ. ಬಾಯಿಯಲ್ಲಿ ಹಾಕಿಕೊಳ್ಳುತ್ತಿದ್ದಂತೆ ಪಟಾಕಿ ಸಿಡಿದಿದೆ.

ಪಟಾಕಿ ಸಿಡಿದಿದ್ದರಿಂದ ಆನೆಯ ಬಾಯಿ ಹಾಗೂ ನಾಲಗೆಗೆ ಗಂಭೀರ ಗಾಯಗಳಾಗಿದ್ದವು. ಗರ್ಭಿಣಿ ಆನೆ ಯಾವೊಬ್ಬ ಗ್ರಾಮಸ್ಥರಿಗೂ ತೊಂದರೆ ನೀಡಿರಲಿಲ್ಲ. ಬಾಯಿಯಲ್ಲಿ ಪಟಾಕಿ ಸಿಡಿಯುತ್ತಿದ್ದಂತೆ ನೋವಿನಲ್ಲಿ ರಸ್ತೆ ತುಂಬಾ ಓಡಾಡಿದೆ. ನೋವಿನಿಂದಾಗಿ ಆನೆ ವೆಲ್ಲಿಯಾರ್ ನದಿ ಹತ್ತಿರ ತೆರಳಿದ್ದು, ಆದರೆ ನೋವು ಸಹಿಸಲಾಗದೆ ನದಿಯಲ್ಲಿ ಮುಳುಗಿದೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಆನೆಯನ್ನು ಮೇಲೆತ್ತಲು ಅರಣ್ಯ ಇಲಾಖೆ ಅಧಿಕಾರಿಗಳು ನೀಲಕಂಠನ್ ಹಾಗೂ ಸುರೇಂದ್ರನ್ ಎಂಬ ಎರಡು ಆನೆಗಳನ್ನು ಕರೆ ತಂದಿದ್ದು, ಅಷ್ಟೊತ್ತಿಗಾಗಲೇ ಸಂಜೆ 4ರ ಸುಮಾರಿಗೆ ಆನೆ ನದಿಯಲ್ಲೇ ಸಾವನ್ನಪ್ಪಿದೆ.

ಘಟನೆ ನಡೆದ ಕುರಿತು ಮಲಪ್ಪುರಂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಅರಣ್ಯಾಧಿಕಾರಿಯೊಬ್ಬರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಿದ್ದಾರೆ.

ಅರಣ್ಯಾಧಿಕಾರಿ ಮೋಹನ್ ಕೃಷ್ಣನ್ ಅವರು ಈ ವಿಡಿಯೋವನ್ನು ಫೇಸ್ಬುಕ್‍ನಲ್ಲಿ ಹಂಚಿಕೊಂಡಿದ್ದು, ಮನಮುಟ್ಟುವ ಸಾಲುಗಳನ್ನು ಬರೆದಿದ್ದಾರೆ. ಅವಳು ಎಲ್ಲರನ್ನೂ ನಂಬಿದ್ದಳು, ಯಾವಾಗ ತಾನು ತಿಂದ ಪೈನಾಪಲ್ ಬ್ಲಾಸ್ಟ್ ಆಯಿತೋ ಆಗ ಆಘಾತಕ್ಕೊಳಗಾಗಿದ್ದಾಳೆ. ಆದರೆ ಅವಳಿಗಾಗಿ ಅಲ್ಲ ಹೊಟ್ಟೆಯಲ್ಲಿರುವ ತನ್ನ ಮಗುವಿಗಾಗಿ. ಅವಳು ಇನ್ನು 18-20 ತಿಂಗಳಲ್ಲಿ ಮಗುವಿಗೆ ಜನ್ಮ ನೀಡುತ್ತಿದ್ದಳು ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ತಮ್ಮ ಸಿಬ್ಬಂದಿ ಜೊತೆ ಸೇರಿ ವಿಧಿವತ್ತಾಗಿ ಆನೆಗೆ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಆದರೆ ಒಂದೇ ಪ್ರಶ್ನೆ ಏನೂ ಮಾಡದೆ ಆ ಅನೆಗೆ ಹೀಗೆ ಮಾಡಿದವರಿಗೆ… ಮನುಜ ನೀನೇಕೆ ಇಷ್ಟು ಕ್ರೂರಿ