KARNATAKA
ಅಪರೇಷನ್ ಥಿಯೇಟರ್ ನಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿದ ವೈದ್ಯ ಕರ್ತವ್ಯದಿಂದ ವಜಾ

ಚಿತ್ರದುರ್ಗ ಫೆಬ್ರವರಿ 09: ಸರಕಾರಿ ಆಸ್ಪತ್ರೆಯ ಅಪರೇಷನ್ ಥಿಯೇಟರ್ ನಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿದ ಹೊರಗುತ್ತಿಗೆ ವೈದ್ಯ ಡಾ. ಅಬಿಷೇಕ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಿ ಚಿತ್ರದುರ್ಗ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಆದೇಶಿಸಿದ್ದಾರೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯ ಡಾ. ಅಬಿಷೇಕ್ ಅವರು ಭರಮಸಾಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಕಳೆದ ಫೆ.7 ರಂದು ಪ್ರೀ ವೆಡ್ಡಿಂಗ್ ಶೂಟ್ ಮಾಡಿರುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿತ್ತು.

ಇದನ್ನು ಗಮನಿಸಿದ ಚಿತ್ರದುರ್ಗ ಜಿಲ್ಲಾಧಿಕಾರಿ ವೆಂಕಟೇಶ್ ಅವರು ಈ ಕಾರ್ಯವು ನಿಯಮಬಾಹಿರವಾಗಿದ್ದು, ಗುತ್ತಿಗೆ ಆಧಾರದ ವೈದ್ಯರು ಕರ್ತವ್ಯ ಲೋಪವೆಸಗಿರುತ್ತಾರೆ. ಹೀಗಾಗಿ ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳ ವರದಿಯನ್ವಯ ಡಾ. ಅಭಿಷೇಕ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಮಾಹಿತಿ ನೀಡಿದ್ದಾರೆ.