LATEST NEWS
ಮಾರ್ಚ್ 11 ರಿಂದ ಮುಂಗಾರು ಪೂರ್ವ ಮಳೆ – ಕರಾವಳಿಯಲ್ಲಿ ಗುಡುಗು ಸಿಡಿಲು ಸಹಿತ ಮಳೆ ಸಾಧ್ಯತೆ

ಮಂಗಳೂರು ಮಾರ್ಚ್ 09: ಬಿಸಿಲ ಬೇಗೆಯಿಂದ ಬಳಲುತ್ತಿರುವ ಕರಾವಳಿಗೆ ಹವಾಮಾನ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ. ಅದರಂತೆ ಈ ವರ್ಷದ ಪೂರ್ವ ಮುಂಗಾರು ಮಳೆ ಸದ್ಯದಲ್ಲೇ ರಾಜ್ಯಕ್ಕೆ ಎಂಟ್ರಿಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಾರ್ಚ್ 11 ಹಾಗೂ 12 ರಂದು ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಕರ್ನಾಟಕದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಿಸಿಲ ತಾಪಕ್ಕೆ, ಮಳೆ ಮಾರುತಗಳು ಚುರುಕುಗೊಂಡಿರುವ ಕಾರಣ ಮಾ.11ರಿಂದ ರಾಜ್ಯದ ವಿವಿಧ ಭಾಗದಲ್ಲಿ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆ ಕ್ಯಾಲೆಂಡರ್ ಪ್ರಕಾರ ಮಾರ್ಚ್ ನಿಂದ ಮೇ ವರೆಗೆ ಮುಂಗಾರು ಪೂರ್ವ ಅವಧಿಯಾಗಿದೆ. ಈ ಅವಧಿಯಲ್ಲಿ ಬಿಸಿಲ ತಾಪಕ್ಕೆ ಮಳೆಯಾಗಲಿದೆ. ಅದೇ ರೀತಿಯ ವಾತಾವರಣ ಸೃಷ್ಟಿಯಾಗಿರುವು ದರಿಂದ ಮಾ. 12 ರಿಂದ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಪ್ರಮುಖವಾಗಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮಾ.12 ರಿಂದ 14 ರವರೆಗೆ ಮೂರು ದಿನ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಾ.11ರಿಂದ ಮಾ.14ರವರೆಗೆ ಗುಡುಗು ಸಹಿತ ಹಗುರ ಮಳೆಯಾಗುವ ಲಕ್ಷಣ ಕಂಡು ಬಂದಿದೆ. ಮೊದಲ ಎರಡು ದಿನ ಹೆಚ್ಚಿನ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಳ ಉಪಸಾಗರದಲ್ಲಿ ಸರ್ಕ್ಯುಲೇಷನ್ ಇದೆ. ಇದರ ಪ್ರಭಾವದಿಂದ ಬೆಂಗಳೂರು, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹಾಸನ, ಚಿಕ್ಕಮಗಳೂರು, ಮಂಡ್ಯ, ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕೆಲವು ಕಡೆ ಅಲ್ಲಲ್ಲಿ ಮಾರ್ಚ್ 11 ಹಾಗೂ 12 ರಂದು ಹಗುರವಾಗಿ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ ಎಂದು ಮುನ್ಸೂಚನೆ ಇದೆ. ಇದು ಈ ವರ್ಷದ ಪೂರ್ವ ಮುಂಗಾರು ಮಳೆಯ ಅಧಿಕೃತ ಎಂಟ್ರಿಯಾಗಿದೆ. ದಕ್ಷಿಣ ಕರ್ನಾಟಕದ ಜಿಲ್ಲೆಗಳು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿಂದ ಬೇಸತ್ತಿರುವ ಜನರಿಗೆ ಇದು ಗುಡ್‌ನ್ಯೂಸ್ ಆಗಿದೆ.