LATEST NEWS
ಜಗದೀಶ್ ಅಧಿಕಾರಿಗೆ ಮಸಿ ಬಳಿಯಲು ಘೋಷಿಸಿದ್ದ ಹಣ ಬಡ ಮಕ್ಕಳ ಶಿಕ್ಷಣಕ್ಕೆ ಬಳಕೆ – ಪ್ರತಿಭಾ ಕುಳಾಯಿ
ಮಂಗಳೂರು ಫೆಬ್ರವರಿ 10: ಕೋಟಿಚೆನ್ನಯ್ಯರ ಕುರಿತಂತೆ ಅವಹೇಳನಕಾರಿ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ಅವರು ಮುಖಕ್ಕೆ ಮಸಿ ಬಳಿದರೆ 1 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದ ಕಾಂಗ್ರೇಸ್ ನಾಯಕಿ ಪ್ರತಿಭಾ ಕುಳಾಯಿ ಅವರು ಜಗದೀಶ್ ಅಧಿಕಾರಿಯವರು ಕ್ಷಮೆಯಾಚಿಸಿದ ಹಿನ್ನೆಲೆ ಆ ಒಂದು ಲಕ್ಷ ರೂಪಾಯಿ ಹಣವನ್ನು ಸಮಾಜದ ಬಡ ಮಕ್ಕಳ ಶಿಕ್ಷಣಕ್ಕಾಗಿ ನೀಡುವುದಾಗಿ ಹೇಳಿದ್ದಾರೆ.
ಧಾರ್ಮಿಕ ಸಮಾರಂಭವೊಂದರಲ್ಲಿ ಕಾಂಗ್ರೇಸ್ ಮುಖಂಡ ಜನಾರ್ಧನ ಪೂಜಾರಿಯವರ ಕಾಲು ಹಿಡಿಯುವುದಿಲ್ಲ ಎಂದು ಹೇಳಿಕೆ ನೀಡಿದ್ದ ಜಗದೀಶ್ ಅಧಿಕಾರಿ ನಂತರ, ಫೋನ್ ಸಂಭಾಷಣೆಯೊಂದರಲ್ಲಿ ತುಳುವರ ಆರಾಧ್ಯದೈವ ಕೋಟಿಚೆನ್ನಯ್ಯರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಹಿನ್ನಲೆ ಪ್ರತಿಭಾ ಅವರು ಜಗದೀಶ್ ಅವರ ಹೇಳಿಕೆಯನ್ನು ಖಂಡಿಸಿದ್ದರು. ಪತ್ರಿಕಾಗೋಷ್ಠಿ ನಡೆಸಿ ಕೋಟಿ, ಚೆನಯ್ಯರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ ಅಧಿಕಾರಿಯವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದರು.
ಮೂರು ದಿನಗಳಲ್ಲಿ ಕ್ಷಮೆಯಾಚಿಸದಿದ್ದರೆ ಅಧಿಕಾರಿಯ ಮುಖಕ್ಕೆ ಮಸಿ ಬಳಿದವರಿಗೆ ಒಂದು ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಫೇಸ್‌ಬುಕ್ ಲೈವ್‌ನಲ್ಲಿ ಹೇಳಿದ್ದರು. ಮೂರು ದಿನಗಳಲ್ಲಿ ಅಧಿಕಾರಿಯನ್ನು ಬಿಜೆಪಿಯಿಂದ ಹೊರಹಾಕದಿದ್ದರೆ, ಅವರು ಬಿಜೆಪಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಾರೆ ಎಂದು ಕೂಡಾ ಹೇಳಿದ್ದರು.
ಮಂಗಳವಾರ ರಾತ್ರಿ, ಅಧಿಕಾರಿಯವರು ಕ್ಷಮೆಯಾಚಿಸಲು ಗರೋಡಿಗೆ ಭೇಟಿ ನೀಡಿದ ಕೂಡಲೇ, ಪ್ರತಿಭಾ ಕುಳಾಯಿಯವರು ಫೇಸ್‌ಬುಕ್‌ನಲ್ಲಿ ಲೈವ್ ಬಂದಿದ್ದು ಈ ಹಿಂದೆ ಘೋಷಿಸಿದ್ದ ಒಂದು ಲಕ್ಷ ರೂಪಾಯಿಯನ್ನು ದೀನದಲಿತ ಕುಟುಂಬಗಳ ಮಕ್ಕಳ ಶಿಕ್ಷಣಕ್ಕಾಗಿ ವ್ಯಯಿಸುವುದಾಗಿ ಹೇಳಿದ್ದಾರೆ.