KARNATAKA
ರಾಮದಾಸ್ ಗೆ ಸಡ್ಡು ಹೊಡೆದು ಬಸ್ ನಿಲ್ದಾಣದ ಗೋಪುರ ತೆರವುಗೊಳಿಸಿದ ಸಂಸದ ಪ್ರತಾಪ್ ಸಿಂಹ

ಮೈಸೂರು ನವೆಂಬರ್ 27: ಭಾರೀ ವಿವಾದಕ್ಕೆ ಕಾರಣವಾಗಿದ್ದ ಮೈಸೂರಿವ ವಿವಾದಿತ ಬಸ್ ನಿಲ್ದಾಣದಲ್ಲಿದ್ದ ಮೂರು ಗೋಪುರಗಳಲ್ಲಿ ಎರಡು ಗೋಪುರಗಳನ್ನು ತೆಗೆದು ಹಾಕಲಾಗಿದ್ದು, ನಾನು ಹೇಳಿದಂತೆ ನಡೆದುಕೊಂಡಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ್ ಟ್ವೀಟ್ ಮಾಡಿದ್ದಾರೆ.
ಊಟಿ ರಸ್ತೆಯ ಜೆಎಸ್ಎಸ್ ಕಾಲೇಜಿನ ಬಳಿ ನಿರ್ಮಿಸಿದ್ದ, ಮಸೀದಿಯ ಗುಂಬಜ್ ಮಾದರಿಯಲ್ಲಿದೆ ಎಂಬ ಕಾರಣದಿಂದ ವಿವಾದಕ್ಕೀಡಾಗಿದ್ದ ಬಸ್ ನಿಲ್ದಾಣದ ಮೇಲಿನ ಮೂರು ಗುಂಬಜ್‌ಗಳಲ್ಲಿ ಎರಡನ್ನು ತೆರವುಗೊಳಿಸಲಾಗಿದೆ. ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕ-ಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದೀನೇ, ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ, ಅದರಂತೆ ನಡೆದುಕೊಂಡಿದ್ದೇನೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿಗಳಿಗೆ ಹಾಗೂ ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಜಿ ಅವರಿಗೂ ಧನ್ಯವಾದಗಳು ಎಂದು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಆದರೆ ನಿಲ್ದಾಣವನ್ನು ಅನುಮತಿ ಪಡೆಯದೇ ನಿರ್ಮಿಸಲಾಗಿದ್ದು, ಏಳು ದಿನಗಳ ಒಳಗೆ ತೆರವುಗೊಳಿಸಬೇಕು, ಮೂರು ದಿನಗಳ ಒಳಗೆ ವಿವರಣೆ ನೀಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮೈಸೂರು ಮಹಾನಗರ ಪಾಲಿಕೆ ಹಾಗೂ ನಿಲ್ದಾಣ ನಿರ್ಮಿಸಿದ ಕೆಆರ್‌ಐಡಿಎಲ್ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದ್ದರು. ಈ ವಿಚಾರ ಇದೀಗ ಮುಚ್ಚಿ ಹೋಗಿದ್ದು, ಇಡೀ ಪ್ರಕರಣದಲ್ಲಿ ಹಿರಿಯ ಶಾಸಕ ರಾಮದಾಸ್ ವಿರುದ್ದ ಸಂಸದ ಪ್ರತಾಪ್ ಸಿಂಹ ತಮ್ಮ ಮೈಲುಗೆ ಸಾಧಿಸಿದ್ದಾರೆ.