LATEST NEWS
ಜೆಡಿಎಸ್ ಕದ ತಟ್ಟುತ್ತಿರುವ ಕಾಂಗ್ರೇಸ್ ಮುಖಂಡ ಪ್ರಮೋದ್ ಮಧ್ವರಾಜ್
ಜೆಡಿಎಸ್ ಕದ ತಟ್ಟುತ್ತಿರುವ ಕಾಂಗ್ರೇಸ್ ಮುಖಂಡ ಪ್ರಮೋದ್ ಮಧ್ವರಾಜ್
ಉಡುಪಿ ಮಾರ್ಚ್ 18: ಉಡುಪಿಯಲ್ಲಿ ಅಚ್ಚರಿ ಬೆಳವಣಿಗೆಯೊಂದರಲ್ಲಿ ಕಾಂಗ್ರೇಸ್ ಮುಖಂಡ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಜೆಡಿಎಸ್ ಸೇರ್ಪಡೆಗೆ ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದು, ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಗೆ ಕಾರಣವಾಗಿದೆ.
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷಾಂತರ ಪರ್ವ ಆರಂಭವಾಗಿದ್ದು, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲೂ ಕೂಡ ಇಂದು ಕಂಡು ಬರುವ ಸಾಧ್ಯತೆ ಹೆಚ್ಚಾಗಿದೆ.
ಕಾಂಗ್ರೇಸ್ ಹಾಗೂ ಜೆಡಿಎಸ್ ಜಂಟಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಹಿನ್ನಲೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಿದೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ ಇಲ್ಲದ ಹಿನ್ನಲೆ , ಕಾಂಗ್ರೇಸ್ ನ ಮುಖಂಡರು ಈಗ ಜೆಡಿಎಸ್ ಕದ ತಟ್ಟುತ್ತಿದ್ದಾರೆ.
ನಿನ್ನೆ ತನಕ ಕಾಂಗ್ರೆಸ್ ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಮೋದ್ ,ದಿಢೀರ್ ಅಂತ ಮಾಜಿ ಪ್ರಧಾನಿ ದೇವೇಗೌಡ ಮತ್ತು ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಜೆಡಿಎಸ್ ನಲ್ಲಿ ಅವಕಾಶ ಕೊಟ್ಟರೆ ಸ್ಪರ್ಧಿಸುವುದಾಗಿ ಜೆಡಿಎಸ್ ವರಿಷ್ಠರ ಬಳಿ ಪ್ರಮೋದ್ ಮಧ್ವರಾಜ್ ಮನವಿ ಮಾಡಿಕೊಂಡಿದ್ದು ನಾಳೆಯೊಳಗೆ ಅಂತಿಮ ನಿರ್ಧಾರ ಹೊರಬೀಳಲಿದೆ.
ಈ ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಶಾಸಕ ಮತ್ತು ಸಚಿವರಾಗಿ ಪ್ರಮೋದ್ ಸೇವೆ ಸಲ್ಲಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ರಘುಪತಿ ಭಟ್ ವಿರುದ್ಧ ಸೋತಿದ್ದರು. ಬಳಿಕ ಪ್ರಮೋದ್ ಮಧ್ವರಾಜ್ ಬಿಜೆಪಿಯ ಕದವನ್ನೂ ತಟ್ಟಿ ಗಮನ ಸೆಳೆದಿದ್ದರು.ಆದರೆ ಕಾರಣಾಂತರಗಳಿಂದ ಬಿಜೆಪಿ ಸೇರ್ಪಡೆ ಆಗಿರಲಿಲ್ಲ.
ಆದರೆ ಶತಾಯಗತಾಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿಯೇ ಸಿದ್ಧ ಎಂದು ಲಾಬಿ ಮಾಡ್ತಿರೋ ಮಾಜಿ ಸಚಿವ ಪ್ರಮೋದ್ ,ಕಾಂಗ್ರೆಸ್ ಪಕ್ಷ ಅಥವಾ ಜೆಡಿಎಸ್ ಮೂಲಕ ಸ್ಪರ್ಧಿಸಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ರಾಜಧಾನಿಯಲ್ಲಿ ಬೀಡುಬಿಟ್ಡಿರೋ ಮಧ್ವರಾಜ್ ,ಜೆಡಿಎಸ್ ಮುಖಂಡರ ಜೊತೆ ಒಂದು ಸುತ್ತಿನ ಮಾತುಕತೆಯನ್ನೂ ಮುಗಿಸಿದ್ದಾರೆ.ಈಗಾಗಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರವು ಮೈತ್ರಿ ಪಕ್ಷದ ಒಪ್ಪಂದದಂತೆ ಜೆಡಿಎಸ್ ಪಾಲಾಗಿದೆ.
ಹೀಗಿದ್ದರೂ ,ಕಾಂಗ್ರೆಸ್ ಪ್ರಬಲವಾಗಿರುವ ಈ ಕ್ಷೇತ್ರವನ್ನು ಕಾಂಗ್ರೆಸ್ ಗೆ ಬಿಟ್ಟುಕೊಡಬೇಕು ಎಂಬ ಪ್ರಯತ್ನವನ್ನೂ ಈ ಭಾಗದ ಮುಖಂಡರು ಮಾಡುತ್ತಿದ್ದಾರೆ.ಇದೇ ಹೊತ್ತಿಗೆ ಪ್ರಮೋದ್ ಮಧ್ವರಾಜ್ ಜೆಡಿಎಸ್ ಸೇರ್ಪಡೆ ದಾಳ ಉರುಳಿಸಿದ್ದು ,ಬಿಜೆಪಿ ನಾಯಕರಲ್ಲೂ ಹೊಸ ಲೆಕ್ಕಾಚಾರಗಳಿಗೆ ನಾಂದಿ ಹಾಡಿದೆ. ಮಾತ್ರವಲ್ಲ ,ಕಾಂಗ್ರೆಸ್ ಮತ್ತು ಜೆಡಿಎಸ್ ಮತಗಳನ್ನು ಸೆಳೆಯುವ ಮೂಲಕ ಬಿಜೆಪಿ ಭದ್ರಕೋಟೆಯನ್ನು ಭೇದಿಸಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರದ್ದು.