Connect with us

    UDUPI

    ಸುವ್ಯವಸ್ಥಿತ ಪರ್ಯಾಯ ಆಚರಣೆಗೆ ನೆರವಾಗಿ : ಜಿಲ್ಲಾಡಳಿತಕ್ಕೆಪ್ರಮೋದ್ ಮಧ್ವರಾಜ್ ಸೂಚನೆ

    ಸುವ್ಯವಸ್ಥಿತ ಪರ್ಯಾಯ ಆಚರಣೆಗೆ ನೆರವಾಗಿ : ಜಿಲ್ಲಾಡಳಿತಕ್ಕೆಪ್ರಮೋದ್ ಮಧ್ವರಾಜ್ ಸೂಚನೆ

    ಉಡುಪಿ, ಡಿಸೆಂಬರ್ 15: ಉಡುಪಿ ನಗರಸಭೆಗೆ ರಸ್ತೆಯ ಹೊಂಡಗುಂಡಿ ಮುಚ್ಚಲು ಒಂದು ಕೋಟಿ ರೂ. ಅನುದಾನ ನೀಡಿದೆ.

    ಪರ್ಯಾಯದ ವೇಳೆ ಉಡುಪಿ ನಗರ ಸ್ವಚ್ಛ ಹಾಗೂ ಸೌಂದರ್ಯದಿಂದ ಕಂಗೊಳಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಉಡುಪಿ ನಗರಸಭೆ ಪೌರಾಯುಕ್ತರಿಗೆ ಖಡಕ್ ಸೂಚನೆ ನೀಡಿದರು.
    ಸಚಿವರ ಅಧ್ಯಕ್ಷತೆಯಲ್ಲಿ , ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಫಲಿಮಾರು ಪರ್ಯಾಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

    ಉಡುಪಿ ಮಠದ ಪರ್ಯಾಯದ ವೇಳೆ ಜಿಲ್ಲಾಡಳಿತ ಒದಗಿಸುವ ನೆರವು ಹಾಗೂ ಪೂರಕ ಕ್ರಮಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಿದರಲ್ಲದೆ, ಡಿಸೆಂಬರ್ 30ರೊಳಗೆ ಎಲ್ಲ ರಸ್ತೆಗಳು ಹೊಂಡ ಮುಕ್ತವಾಗಿರಬೇಕೆಂದರು.

    ಫಲಿಮಾರು ಮಠದ ರಾಘವೇಂದ್ರ ಆಚಾರ್ಯ ಅವರು ಪುರಪ್ರವೇಶ ಹಾಗೂ ಪರ್ಯಾಯ ಮೆರವಣಿಗೆಗಳೆರಡೂ ಒಂದೇ ಮಾರ್ಗದಲ್ಲಿ ಸಂಚರಿಸಲಿದ್ದು ಟ್ಯಾಬ್ಲೊ ಸಂಚಾರಕ್ಕೆ ಅನುವು ಮಾಡಿ ಕೊಡಲು ಮನವಿ ಮಾಡಿದರು.

    16 ಫೀಟ್‍ಗಿಂತ ಎತ್ತರ ಟ್ಯಾಬ್ಲೊಗಳು ಇರಬಾರದು ಎಂದ ಸಚಿವರು, ಮೆಸ್ಕಾಂ ಮತ್ತು ಬಿಎಸ್‍ಎನ್‍ಎಲ್ ಹಾಗೂ ಕೇಬಲ್ ವಯರ್‍ಗಳನ್ನು ಅಳವಡಿಸಿದವರು ರಸ್ತೆಗಳಲ್ಲಿ ವಯರ್‍ಗಳು ಇರದಂತೆ ನೋಡಿಕೊಳ್ಳಬೇಕೆಂದರು.
    ಅದೇ ರೀತಿ ರಸ್ತೆಗಳ ತುಂಬಾ ಹೋರ್ಡಿಂಗ್ಸ್, ಬಂಟಿಂಗ್ಸ್ ಹಾಗೂ ಬ್ಯಾನರ್ ಗಳನ್ನು ಯಾರೇ ಹಾಕುವುದಿದ್ದರೂ ಪೊಲೀಸ್ ಮತ್ತು ನಗರಸಭೆಯ ಅನುಮತಿ ಅಗತ್ಯವಾಗಿದ್ದು, ಇಲಾಖೆಗಳು ಅನುಮತಿಯನ್ನು 24 ಗಂಟೆಯೊಳಗಾಗಿ ನೀಡಲು ಸಚಿವರು ಆದೇಶಿಸಿದರು.

    ಆರೋಗ್ಯ ಸುರಕ್ಷೆ, ನೀರು ಪೂರೈಕೆ, ವಿದ್ಯುತ್ ವ್ಯತ್ಯಯವಾಗದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು.

    ಪ್ರವಾಸೋದ್ಯಮ ಇಲಾಖೆ ಪರ್ಯಾಯಕ್ಕೆ ವಿವಿಧೆಡೆಗಳಿಂದ ಆಕರ್ಷಿಸಲು ಕೆ ಎಸ್ ಟಿಡಿಸಿ ಯವರೊಂದಿಗೆ ಸಮನ್ವಯ ಸಾಧಿಸಿ ಟೂರ್ ಪ್ಯಾಕೇಜ್ ರೂಪಿಸಿ ಎಂದು ಸಲಹೆ ಮಾಡಿದರು.

    ನಗರಸಭೆಗೆ ಶೌಚಾಲಯ ನಿರ್ವಹಣೆ ಸಂಬಂಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ ಸಚಿವರು, ಪರ್ಯಾಯ ಸಮಿತಿಗೂ ಹೆಚ್ಚಿನ ಹೊಣೆ ಇದ್ದು, ಸ್ವಚ್ಛತೆ ಅದರಲ್ಲೂ ಮುಖ್ಯವಾಗಿ ಹಸಿಕಸ ನಿರ್ವಹಣೆಗೆ ವಿಶೇಷ ಒತ್ತು ನೀಡಲು ಹೇಳಿದರು.

    ಸಮಾರಂಭಕ್ಕೆ ಆಗಮಿಸುವ ವಿಐಪಿಗಳ ಪಟ್ಟಿಯನ್ನು ಮುಂಚಿತವಾಗಿ ನೀಡಬೇಕು ಎಂದು ಹೇಳಿದರು.

    ರಸ್ತೆಯೊಂದಿಗೆ ದಾರಿದೀಪದ ವ್ಯವಸ್ಥೆಯನ್ನು ಸರಿಪಡಿಸಲು ಸೂಚಿಸಿದ ಸಚಿವರು, ಹೊರೆಕಾಣಿಕೆ ಬರುವ ಮಾರ್ಗದಲ್ಲೂ ಪೊಲೀಸ್ ಸುರಕ್ಷೆ ನೀಡಬೇಕೆಂದರು.

    ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕಾರಿ ಅನುರಾಧ ಅವರು ಉಪಸ್ಥಿತರಿದ್ದರು.

    ವಿವಿಧ ಇಲಾಖೆ ಅಧಿಕಾರಿಗಳು, ಮಠದ ಪ್ರತಿನಿಧಿಗಳು ಪಾಲ್ಗೊಂಡರು.

    Share Information
    Advertisement
    Click to comment

    Leave a Reply

    Your email address will not be published. Required fields are marked *