DAKSHINA KANNADA
ತೇಪೆಯಲ್ಲೂ ಕಳಪೆ, ಒಂದೇ ಮಳೆಗೆ ಕೊಚ್ಚಿ ಹೋದ ತೇಪೆ ಕಾಮಗಾರಿ, ಮತ್ತೆ ಹೊಂಡಮಯವಾಗಿದೆ ರಾಷ್ಟ್ರೀಯ ಹೆದ್ದಾರಿ 75

ತೇಪೆಯಲ್ಲೂ ಕಳಪೆ, ಒಂದೇ ಮಳೆಗೆ ಕೊಚ್ಚಿ ಹೋದ ತೇಪೆ ಕಾಮಗಾರಿ, ಮತ್ತೆ ಹೊಂಡಮಯವಾಗಿದೆ ರಾಷ್ಟ್ರೀಯ ಹೆದ್ದಾರಿ 75
ಮಂಗಳೂರು, ಅಕ್ಟೋಬರ್ 17: ಬಂದರು ನಗರಿ ಮಂಗಳೂರು ಹಾಗೂ ರಾಜ್ಯ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಹೆದ್ದಾರಿ ಇದೀಗ ಹೊಂಡ ಗುಂಡಿಗಳ ರಾಜಮಾರ್ಗವಾಗಿ ಬದಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಬಿ.ಸಿ.ರೋಡ್ ನಿಂದ ಅಡ್ಡಹೊಳೆ ತನಕ ಹೆದ್ದಾರಿ ಹೊಂಡ-ಗುಂಡಿಗಳಿಂದಲೇ ಮುಚ್ಚಿ ಹೋಗಿವೆ.

ಈ ಹೊಂಡ ಗುಂಡಿಗಳನ್ನು ಮುಚ್ಚಲು ಹೆದ್ದಾರಿ ಇಲಾಖೆ ಈಗಾಗಲೇ 16 ಕೋಟಿ ರೂಪಾಯಿಗಳ ಕಾಮಗಾರಿಯನ್ನು ಗುತ್ತಿಗೆ ನೀಡಿದೆ.
ಗುತ್ತಿಗೆ ವಹಿಸಿಕೊಂಡಿರುವ ಕಂಪನಿ ಎರಡು ದಿನಗಳ ಕಾಲ ತೇಪೆ ಹಚ್ಚುವ ಕಾಮಗಾರಿ ನಡೆಸಿದ್ದು, ತೇಪೆಯೂ ಕಳೆಪೆಯಾದ ಕಾರಣ ಒಂದೇ ಮಳೆಗೆ ಎಲ್ಲವೂ ಕೊಚ್ಚಿಹೋಗಿವೆ. ಇದೀಗ ತೇಪೆ ಹಾಕಿದ ಸ್ಥಳದಲ್ಲಿ ಮತ್ತೆ ಹೊಂಡ-ಗುಂಡಿಗಳ ಉದ್ಭವವಾಗಿದೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ರಸ್ತೆಗಿಂದ ಹೊಂಡಗಳೇ ಹೆಚ್ಚಾಗಿವೆ.
ಬಿ.ಸಿ. ರೋಡ್ ನಿಂದ ಅಡ್ಡಹೊಳೆ ತನಕದ ಸುಮಾರು 75 ಕಿಲೋ ಮೀಟರ್ ರಸ್ತೆಯು ಸಂಪೂರ್ಣ ಶಿಥಿಲಗೊಂಡಿದೆ.
ಮಳೆಗಾಲದಲ್ಲಿ ನೀರು ಸರಿಯಾಗಿ ಹರಿಯಲು ಚರಂಡಿ ನಿರ್ಮಾಣ ಮಾಡದ ಹಿನ್ನಲೆಯಲ್ಲಿ ಪ್ರತೀ ಬಾರಿಯೂ ಮಳೆಗಾಲಕ್ಕೆ ಹೆದ್ದಾರಿಯ ಕೆಲವು ನಿರ್ದಿಷ್ಟ ಕಡೆಗಳಲ್ಲಿ ರಸ್ತೆ ಸಂಪೂರ್ಣ ಹದೆಗೆಡುತ್ತಿದೆ.
ಬಿ.ಸಿ.ರೋಡ್, ಮೆಲ್ಕಾರ್, ಪಾಣೆಮಂಗಳೂರು, ಕಲ್ಲಡ್ಕ, ದಾಸರಕೋಡಿ, ಸೂರಿಕುಮೇರು, ಮಾಣಿ, ಉಪ್ಪಿನಂಗಡಿ, ನೆಲ್ಯಾಡಿ, ಅಡ್ಡಹೊಳೆ ಹೀಗೆ ಹಲವು ಸ್ಪಾಟ್ ಗಳು ಪ್ರತೀ ಮಳೆಗಾಲದ ಸಂದರ್ಭದಲ್ಲೂ ಮಳೆ ನೀರು ರಸ್ತೆಯಲ್ಲೇ ಹರಿಯುವ ಕಾರಣ ಸಂಪೂರ್ಣ ಹದೆಗೆಡುತ್ತಿದೆ.
ಈ ಬಾರಿಯೂ ಮತ್ತದೇ ಪರಿಸ್ಥಿತಿ ನಿರ್ಮಾಣಗೊಂಡಿದೆ. ಯಮ ಗಾತ್ರದ ಗುಂಡಿಗಳು ಈ ರಸ್ತೆಯಲ್ಲಿ ನಿರ್ಮಾಣಗೊಂಡಿದ್ದು, ಈ ಗುಂಡಿಗಳನ್ನು ಮುಚ್ಚುವ ಕಾಮಗಾರಿಯನ್ನು ಹೆದ್ದಾರಿ ಇಲಾಖೆ ಈಗಾಗಲೇ ಆರಂಭಿಸಿದೆ.
ಕಾಮಗಾರಿ ಆರಂಭಗೊಂಡು ಎರಡು ದಿನ ಕಳೆಯುವುದರೊಳಗೆ ಜಿಲ್ಲೆಯಲ್ಲಿ ಮತ್ತೆ ವರುಣನ ಆರ್ಭಟ ಕಂಡು ಬಂದ ಹಿನ್ನಲೆಯಲ್ಲಿ ಕಾಮಗಾರಿಯನ್ನು ಇದೀಗ ಸ್ಥಗಿತಗೊಳಿಸಲಾಗಿದೆ.
ಎರಡು ದಿನಗಳು ನಡೆದ ಕಾಮಗಾರಿಯಲ್ಲಿ ಬಿ.ಸಿ.ರೋಡ್, ಮೆಲ್ಕಾರ್ ಹಾಗೂ ನರಹರಿ ಬೆಟ್ಟದ ಬಳಿ ಹೊಂಡ ಮುಚ್ಚಿ ರಸ್ತೆಗೆ ತೇಪೆ ಹಚ್ಚುವ ಕಾಮಗಾರಿ ನಡೆದಿದೆ. ಆದರೆ ಒಂದೇ ಮಳೆಗೆ ಈ ತೇಪೆ ಎಲ್ಲಿ ಮಾಯವಾಗಿದೆ ಎನ್ನುವುದೇ ಇದೀಗ ಯಕ್ಷಪ್ರಶ್ನೆಯಾಗಿ ಕಾಡಿದೆ.
ಸುಮಾರು 16 ಕೋಟಿ ರೂಪಾಯಿ ವೆಚ್ಚದಲ್ಲಿ ಬಿ.ಸಿ.ರೋಡ್ ನಿಂದ ಅಡ್ಡಹೊಳೆವರೆಗಿನ ಹೊಂಡಗಳನ್ನು ಮುಚ್ಚಿ ತೇಪೆ ಕಾಮಗಾರಿ ನಡೆಸಲು ಗುತ್ತಿಗೆ ನೀಡಲಾಗಿದೆ.
ಗುತ್ತಿಗೆ ವಹಿಸಿಕೊಂಡ ಕಂಪನಿಯು ಮಳೆ ಇರುವ ಸಂದರ್ಭದಲ್ಲೂ ತೇಪೆ ಹಚ್ಚುವ ಕಾಮಗಾರಿ ಕೆಲವು ಕಡೆಗಳಲ್ಲಿ ನಿರ್ವಹಿಸಿದ್ದು, ಮಳೆಯಿಂದ ತೇಪೆ ಕಾಮಗಾರಿಗೆ ಯಾವುದೇ ಹಾನಿಯಾಗುವುದಿಲ್ಲ ಎನ್ನುವ ಭರವಸೆಯನ್ನೂ ನೀಡಿತ್ತು.
ಆದರೆ ಒಂದೇ ಮಳೆಗೆ ಗುಂಡಿ ಮಚ್ಚಲು ಹಾಗೂ ತೇಪೆ ಹಾಕಲಾದ ಡಾಂಬರು ಕೊಚ್ಚಿ ಹೋಗಿದೆ. ತೇಪೆಯಲ್ಲೂ ಕಳಪೆ ಕಾಮಗಾರಿ ನಡೆಸಲಾಗಿದೆ ಎನ್ನುವ ಆರೋಪ ಇದೀಗ ಕೇಳಿ ಬರಲಾರಂಭಿಸಿದೆ.