LATEST NEWS
ಕೇರಳ ಮಾದರಿಯ ಮುಷ್ಕರಕ್ಕೆ ಅಂಚೆ ಸೇವಕರ ನಿರ್ಧಾರ

ಕೇರಳ ಮಾದರಿಯ ಮುಷ್ಕರಕ್ಕೆ ಅಂಚೆ ಸೇವಕರ ನಿರ್ಧಾರ
ಮಂಗಳೂರು ಜೂನ್ 3: ಮಂಗಳೂರಿನಲ್ಲಿ ಅಂಚೆ ಸೇವಕರ ಮುಷ್ಕರ ಮುಂದುವರೆದಿದ್ದು, ಮಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಹೊರ ಭಾಗದಲ್ಲಿ ಅಂಚೆ ಬಂಡಲ್ ಗಳು ರಾಶಿಯಾಗಿ ಬಿದ್ದಿವೆ.
ಏಳನೇ ವೇತನ ಆಯೋಗ ಜಾರಿ ಸಹಿತ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಗ್ರಾಮೀಣ ಅಂಚೆ ಸೇವಕರು ನಡೆಸುತ್ತಿರುವ ಮುಷ್ಕರ 13ನೇ ದಿನಕ್ಕೆ ಕಾಲಿರಿಸಿದೆ. ಮುಷ್ಕರದ ಪರಿಣಾಮ ಗ್ರಾಮೀಣ ಪ್ರದೇಶ ಹಾಗೂ ನಗರದ ಮಗ್ಗುಲಲ್ಲಿರುವ ಹೊರವಲಯದ ಪ್ರದೇಶಗಳಿಗೂ ತಟ್ಟಿದೆ.
ಅಂಚೆ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮ ಅಂಚೆ ಸೇವಕರು ಜೊತೆಯಾಗಿ ಮುಷ್ಕರ ನಡೆಸಿದ ಪರಿಣಾಮ ಕೇರಳದಲ್ಲಿ ಅಂಚೆ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿರುವ ಆರ್ ಎಂಎಸ್ ಕಚೇರಿ ಹೊರಗೆ ಅಂಚೆ ಕಾಗದದ ಬಂಡಲ್ ಗಳು ರಾಶಿ ಬಿದ್ದಿವೆ.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಮಾತ್ರವಲ್ಲದೆ ಕಾವೂರು , ಪಣಂಬೂರು, ಮೀಕಳಿಯ, ಉಳ್ಳಾಲ, ಫರಂಗಿಪೇಟೆ ಮತ್ತಿತರ ಪ್ರದೇಶಗಳಲ್ಲಿ ಕೂಡ ಅಂಚೆ ಚಟುವಟಿಕೆ ಅಸ್ತವ್ಯಸ್ತಗೊಂಡಿದೆ.
ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಹಾಗೂ ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘ ಉಡುಪಿ ವಿಭಾಗದ ನೇತೃತ್ವದಲ್ಲಿ ಗ್ರಾಮೀಣ ಅಂಚೆ ನೌಕರರು ಉಡುಪಿಯ ಪ್ರಧಾನ ಅಂಚೆ ಕಚೇರಿ ಎದುರು ನಡೆಸುತ್ತಿರುವ ಪ್ರತಿಭಟನೆ 13ನೇ ದಿನಕ್ಕೆ ಕಾಲಿಟ್ಟಿದೆ.
ಈ ನಡುವೆ ಬೇಡಿಕೆ ಈಡೇರಿಸದಿದ್ದಲ್ಲಿ ಕೇರಳ ಮಾದರಿಯಲ್ಲಿ ಅಂಚೆ ಸೇವಕರ ಜೊತೆ ಅಂಚೆ ಇಲಾಖೆಯ ನೌಕರರು ಅನಿರ್ಧಿಷ್ಠಾವಧಿ ಮುಷ್ಕರದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.