KARNATAKA
ಗ್ರಾಹಕರ ಹಣ ಗುಳುಂ ಮಾಡಿದ್ದ ಅಂಚೆ ಪಾಲಕನಿಗೆ ಜೈಲು ಹಾದಿ ತೋರಿದ ಕೋರ್ಟ್..!
ಕುಮಟಾ: ಗ್ರಾಹಕರಿಂದ ಸಂಗ್ರಹಿಸಿದ ಹಣವನ್ನು ಅಂಚೆ ಇಲಾಖೆಗೆ ಪಾವತಿಸದೇ ವಂಚನೆ ಮಾಡಿದ್ದ ಅಂಚೆ ಪಾಲಕ ( Post man) ನಿಗೆ ಕುಮಟಾ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ 6 ತಿಂಗಳ ಸಾದಾ ಶಿಕ್ಷೆ ಹಾಗೂ 3 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಕುಮಟಾ ಸೊಪ್ಪಿನ ಹೊಸಳ್ಳಿ ಅಂಚೆ ಕಚೇರಿಯಲ್ಲಿ ನೌಕರನಾಗಿದ್ದ ಚಂದ್ರು ಹಮ್ಮು ಗೌಡ ಶಿಕ್ಷೆಗೊಳಗಾದ ವ್ಯಕ್ತಿಯಾಗಿದ್ದಾರೆ. ಗ್ರಾಹಕರು ತಮ್ಮ ಉಳಿತಾಯ ಹಾಗೂ ಠೇವಣಿ ಖಾತೆಗಳಿಗೆ ತುಂಬಿದ 24,647 ರೂ.ಗಳನ್ನು ಅವರ ಪಾಸ್‌ಬುಕ್‌ಗಳಲ್ಲಿ ದಾಖಲಿಸಿ, ಅದನ್ನು ಇಲಾಖೆಯ ದಾಖಲೆಯಲ್ಲಿ ಬರೆಯದೇ ಮೋಸ ಮಾಡಿದ್ದ ಎನ್ನಲಾಗಿದೆ. ಈ ಸಂಬಂಧ 2012-13 ನೇ ಸಾಲಿನಲ್ಲಿ ಆಗಿನ ಕುಮಟಾ ಅಂಚೆ ನಿರೀಕ್ಷಕ ದೀಪಕ್ ಎಚ್.ಟಿ.ಕುಮಟಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂದಿನ ಕುಮಟಾ ಪಿಎಸ್‌ಐಗಳಾದ ವಸಂತ ಬಂಡಗಾರ ಹಾಗೂ ರೇವತಿ ಅವರು ತನಿಖೆ ನಡೆಸಿ, ದೋಷಾರೋಪಣಾ ಪಟ್ಟಿಯನ್ನು 2014 ರಲ್ಲಿ ಸಲ್ಲಿಸಿದ್ದರು. 17 ಸಾಕ್ಷಿ ಹಾಗೂ 28 ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಮಂಜುನಾಥ ವಿಠ್ಠಲ ಬೋರ್ಕರ್ ವಾದ ಮಂಡಿಸಿದ್ದರು.