National
ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಉಗ್ರ ದಾಳಿಯ ಆತಂಕ…
ನವದೆಹಲಿ, ಜುಲೈ 30: ಹಿಂದುಗಳ ಪವಿತ್ರ ಕೇಂದ್ರವಾದ ಹಾಗೂ ಹಲವಾರು ವರ್ಷಗಳ ವಿವಾದಗಳ ಬಳಿಕ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ತಲೆ ಎತ್ತಲಿರುವ ರಾಮಮಂದಿರದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಉಗ್ರ ದಾಳಿಯ ಆತಂಕ ಎದುರಾಗಿದೆ.
ಗುಪ್ತಚರ ಮಾಹಿತಿ ಪ್ರಕಾರ ಅಫಘಾನಿಸ್ಥಾನದ ಜಲಾಲಾಬಾದ್ ನಲ್ಲಿ ಉಗ್ರ ತರಭೇತಿಯನ್ನು ಪಡೆಯುತ್ತಿರುವ 20 ರಿಂದ 25 ರ ಸಂಖ್ಯೆಯ ಉಗ್ರರು ಭಾರತ ಪಾಕ್ ಅಂತರರಾಷ್ಟ್ರೀಯ ಗಡಿ ಹಾಗೂ ನೇಪಾಳ-ಭಾರತ ಗಡಿ ಮೂಲಕ ದೇಶದೊಳಗೆ ನುಸುಳಲು ಯತ್ನ ನಡೆಸುತ್ತಿರುವ ಮಾಹಿತಿ ಇದೀಗ ಗುಪ್ತಚರ ಮೂಲಗಳಿಗೆ ದೊರೆತಿದೆ.
ಆಗಸ್ಟ್ 5 ಕ್ಕೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಶಿಲಾನ್ಯಾಸ ನೆರವೇರಿಸಲಿದ್ದು, ಅದೇ ದಿನ ಜಮ್ಮು-ಕಾಶ್ಮೀರದಿಂದ 370 ವಿಧಿಯ ರದ್ದುಪಡಿಸಿದ ವರ್ಷಾಚರಣೆಯೂ ಆಗಿದೆ. ಉಗ್ರರು ಜಮ್ಮು-ಕಾಶ್ಮೀರದಲ್ಲಿ ಜನರ ಹತ್ಯೆಗೂ ಯತ್ನ ನಡೆಸಿದ್ದು, ಕಳೆದ ಈದುಲ್ ಫಿತರ್ ಆಚರಣೆಯ ಬಳಿಕ ಈ ದಾಳಿಯನ್ನು ನಡೆಸಲು ಕಾರ್ಯತಂತ್ರ ರಚಿಸಿದ್ದರು ಎನ್ನುವ ಮಾಹಿತಿಯೂ ಲಭ್ಯವಾಗಿದೆ.
ಮೇ 26- 29 ರ ನಡುವೆ ಈ ದಾಳಿಯನ್ನು ನಡೆಸಲು ಯೋಜನೆಯನ್ನೂ ರೂಪಿಸಿದ್ದರು. ಆದರೆ ಭದ್ರತಾಪಡೆಗಳ ಕಟ್ಟುನಿಟ್ಟಿನ ಕಣ್ಗಾವಲಿನಲ್ಲಿ ಉಗ್ರರಿಗೆ ಕೃತ್ಯ ನಡೆಸಲು ಸಾಧ್ಯವಾಗಿರಲಿಲ್ಲ. ಪಾಕಿಸ್ಥಾನ ಸೇನೆಯ ಸ್ಪೆಷಲ್ ಸರ್ವೀಸ್ ಗ್ರೂಪ್ ಈ ಉಗ್ರರಿಗೆ ತರಭೇತಿಯನ್ನು ನೀಡಿದ್ದು, ಇವರನ್ನು ಭಾರತದೊಳಗೆ ನುಸುಳಲು ಎಲ್ಲಾ ರೀತಿಯ ವ್ಯವಸ್ಥೆಯನ್ನೂ ಮಾಡಿಕೊಂಡಿದೆ.
ಇದೇ ಕಾರಣಕ್ಕಾಗಿ ಪಾಕ್ ಸೇನೆಯು ಕಾಶ್ಮೀರ ಗಡಿಭಾಗದಲ್ಲಿ ನಿರಂತರವಾಗಿ ಕದಮ ವಿರಾಮ ಉಲ್ಲಂಘಿಸಿ ಗುಂಡುಗಳನ್ನು ಹಾರಿಸುತ್ತಿದೆ. ಅಲ್ಲದೆ ಈ ಉಗ್ರರ ದೃಷ್ಟಿ ಆಗಸ್ಟ್ 15 ಸ್ವಾತಂತ್ರೋತ್ಸವದ ಮೇಲೂ ನೆಟ್ಟಿದ್ದು, ಆ ದಿನದಂದೂ ದೇಶದಲ್ಲಿ ಹಿಂಸಾತ್ಮಕ ಕೃತ್ಯಗಳನ್ನು ರೂಪಿಸಲು ತಯಾರಿ ನಡೆಸುತ್ತಿದೆ ಎನ್ನುವ ಮಾಹಿತಿಯನ್ನೂ ಗುಪ್ತಚರ ಮೂಲಗಳು ಕಲೆ ಹಾಕಿವೆ. ಈ ನಿಟ್ಟಿನಲ್ಲಿ ಕಾಶ್ಮೀರ, ದೆಹಲಿ ಹಾಗೂ ಆಯೋಧ್ಯೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಲಾಗಿದೆ.