LATEST NEWS
ಮಂಗಳೂರು ವಿಶ್ವವಿದ್ಯಾನಿಲಯದ ದ್ವಿತೀಯ ಬಿ.ಕಾಂ ಪಠ್ಯದಲ್ಲಿ ಅಶ್ಲೀಲ ಲೇಖನ
ಮಂಗಳೂರು ವಿಶ್ವವಿದ್ಯಾನಿಲಯದ ದ್ವಿತೀಯ ಬಿ.ಕಾಂ ಪಠ್ಯದಲ್ಲಿ ಅಶ್ಲೀಲ ಲೇಖನ
ಮಂಗಳೂರು ಜುಲೈ 10: ಅಶ್ಲೀಲ ಕಥೆಗಳನ್ನು ಕದ್ದು ಮುಚ್ಚಿ ಓದುತ್ತಿದ್ದ ಹದಿಹರೆಯದ ಯುವಕರಿಗೆ ಇನ್ನು ಕಾಲೇಜುಗಳಲ್ಲಿ ಮುಕ್ತವಾಗಿ ಇಂಥ ಅವಕಾಶ ದೊರೆಯಲಿದೆ. ಹೌದು ಸದಾ ವಿವಾದಗಳನ್ನೇ ಮೈಮೇಲೆ ಹಾಕಿಕೊಂಡಿರುವ ಮಂಗಳೂರು ವಿಶ್ವವಿದ್ಯಾನಿಲಯ ಇಂಥಹುದೊಂದು ಲೇಖನವಿರುವ ಪಠ್ಯವನ್ನು ಕಾಲೇಜು ಪಠ್ಯ ಪುಸ್ತಕದಲ್ಲಿ ಪ್ರಕಟಿಸಿದೆ.
ಬರಗೂರು ರಾಮಚಂದ್ರಪ್ಪ ಸೈನಿಕರನ್ನು ಅವಹೇಳನಕಾರಿಯಾಗಿ ಬಿಂಬಿಸಿದ ಯುದ್ಧ ಎನ್ನುವ ಲೇಖನವನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಿ ವಿವಾದಕ್ಕೆ ಕಾರಣವಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಇದೀಗ ಮತ್ತೊಂದು ವಿವಾದವನ್ನು ತನ್ನ ಮೈಮೇಲೆ ಹಾಕಿಕೊಂಡಿದೆ.
ಮಟ್ಟಾರು ವಿಠಲ ಹೆಗ್ಡೆ ಎಂಬವರು 1939 ರಲ್ಲಿ ಬರೆದ ಮಗುವಿನ ತಂದೆ ಎನ್ನುವ ಲೇಖನವನ್ನು ದ್ವಿತೀಯ ವರ್ಷದ ಬಿ.ಕಾಂ ವಿದ್ಯಾರ್ಥಿಗಳ ಪಠ್ಯಪುಸ್ತಕದಲ್ಲಿ ಸೇರಿಸಿಕೊಂಡಿರುವುದೇ ಈ ವಿವಾದಕ್ಕೆ ಕಾರಣವಾಗಿದೆ. ವೈದ್ಯರೊಬ್ಬರ ಪತ್ನಿ ತನ್ನ ಶಾರೀರಿಕ ಸುಖವನ್ನು ತನ್ನ ಪತ್ನಿಯಿಂದ ಪಡೆಯದ ಕಾರಣ, ಅನ್ಯ ಯುವಕನೊಂದಿಗೆ ಅನೈತಿಕ ಸಂಬಂಧವನ್ನು ಹೊಂದುತ್ತಾಳೆ.
ಬಳಿಕ ಈ ಅನೈತಿಕ ಸಂಬಂಧದಿಂದ ಮಗುವೊಂದನ್ನು ಪಡೆಯುತ್ತಾಳೆ. ಆ ಬಳಿಕ ಮಗು ತನ್ನ ಗಂಡನದೇ, ಅಥವಾ ಅನೈತಿಕ ಸಂಬಂಧದಿಂದ ಹುಟ್ಟಿದ್ದೇ ಎನ್ನುವ ಗೊಂದಲದವರುವ ಹೆಣ್ಣಿನ ಕಥೆ ಇದಾಗಿದೆ. ಈ ಕಥೆಯಲ್ಲಿ ಯುವಕ ಮತ್ತು ವೈದ್ಯನ ಪತ್ನಿಯ ನಡುವೆ ನಡೆಯುವ ಮಿಲನ ಕ್ರಿಯೆಯನ್ನು ಅತ್ಯಂತ ಅಸಹ್ಯ ರೀತಿಯಲ್ಲಿ ಬರೆಯಲಾಗಿದೆ.
ಹದಿಹರೆಯದ ವಿದ್ಯಾರ್ಥಿಗಳ ಮುಂದೆ ಇದನ್ನು ಪಾಠ ಮಾಡಬೇಕಾದ ಮುಜುಗರ ಉಪನ್ಯಾಸಕರದ್ದಾಗಿದ್ದರೆ, ಇನ್ನೊಂದೆಡೆ ಈ ಅಸಹ್ಯವನ್ನು ಕೇಳಿ ಮುಜುಗರ ಪಡಬೇಕಾದ ಸ್ಥಿತಿಯಲ್ಲಿ ವಿದ್ಯಾರ್ಥಿಗಳಿದ್ದಾರೆ.
ಭಾರತೀಯ ಕೌಟುಂಬಿಕ ಪದ್ದತಿಗೆ ವಿರುದ್ಧವಾಗಿ, ಅನೈತಿಕತೆಯನ್ನು ಬೆಂಬಲಿಸುವಂತಹ ಪ್ರಯತ್ನವನ್ನು ಈ ಲೇಖನದಲ್ಲಿ ಬರೆಯಲಾಗಿದೆ ಎನ್ನುವ ಆರೋಪ ವ್ಯಕ್ತವಾಗಿದೆ. ಅನ್ಯ ಪುರುಷನ ಸಂಬಂಧದಿಂದ ಆದ ಮಗುವೆಂದು ತಿಳಿದರೂ, ವೈದ್ಯನು ಆ ಮಗುವನ್ನು ಒಪ್ಪಿಕೊಳ್ಳುತ್ತಾನೆ.
ಈ ಮೂಲಕ ಪ್ರಗತಿಪರ ಚಿಂತನೆಯನ್ನು ಸಾದರಪಡಿಸುತ್ತಾನೆ ಎನ್ನುವ ಆಶಯವನ್ನೂ ಪಠ್ಯ ಪುಸ್ತಕ ರಚನಾ ಸಮಿತಿ ಕಥೆಯಲ್ಲಿ ಹೇಳಿದೆ. ಅಲ್ಲದೆ ಈ ಕಥೆಯಿಂದ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನೂ ಕೇಳಲಾಗಿದೆ. ಈ ಪ್ರಶ್ನೆಗಳು ಅತ್ಯಂತ ಅಸಹ್ಯ ರೀತಿಯಲ್ಲೇ ಇದೆ.
ಡಾಕ್ಟರರ ಬಿಡುವಿರದ ಕಾರ್ಯ ಬಾಹುಳ್ಯದಿಂದ ರತ್ನ ತೃಪ್ತಿಗೊಳ್ಳದೇ ಇರಲು ಕಾರಣವೇನು, ಸುಬ್ಬನನ್ನು ಕಂಡು ರತ್ನ ಮನಸೋತ ಸಂದರ್ಭವನ್ನು ನಿರೂಪಿಸಿ ಎನ್ನುವ ಪ್ರಶ್ನೆಗಳನ್ನೂ ಈ ಪಠ್ಯದಲ್ಲಿ ವಿದ್ಯಾರ್ಥಿಗಳಿಗೆ ಕೇಳಲಾಗಿದೆ.