FILM
ಮತ್ತೆ ಒಂದಾದ ಸ್ಯಾಮ್ ಪೂನಂ ಜೋಡಿ !
ಮುಂಬೈ: ಎರಡ್ಮೂರು ದಿನಗಳ ಹಿಂದಷ್ಟೇ ತಮ್ಮ ಗಂಡ ಸ್ಯಾಮ್ ಬಾಂಬೆ ವಿರುದ್ಧ ದೈಹಿಕ ಹಲ್ಲೆ ನಡೆಸಿದ್ದಿಕ್ಕೆ ದೂರು ಕೊಡುವುದುರ ಜತೆಗೆ ಡೈವೋರ್ಸ್ ಕೊಡುವುದಕ್ಕೆ ಯೋಚಿಸಿದ್ದ ಪೂನಂ ಪಾಂಡೆ, ಇದೀಗ ಮತ್ತೆ ಗಂಡನ ಮನೆಗೆ ವಾಪಸ್ಸು ಹೋಗಲು ತೀರ್ಮಾನಿಸಿದ್ದಾರೆ.
ಇದಕ್ಕೂ ಮುನ್ನ ತನ್ನ ಗಂಡನ ತನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಪೂನಂ ಪೊಲೀಸರಿಗೆ ದೂರು ಕೊಟ್ಟಿದ್ದರು. ಈ ಪ್ರಕರಣದಲ್ಲಿ ಸ್ಯಾಮ್ ಬಂಧನವಾಗಿ, ಬೇಲ್ ಮೇಲೆ ಹೊರಗೆ ಬಂದಿದ್ದರು. ಆ ನಂತರ ಸ್ಯಾಮ್, ಪೂನಂ ಎದುರು ಸಿಕ್ಕಾಪಟ್ಟೆ ಅತ್ತರಂತೆ. ಹಾಗಾಗಿ ಅವರ ಮೇಲಿನ ಅನುಕಂಪದಿಂದ ದೂರು ಹಿಂದೆ ಪಡೆಯಲು ಪೂನಂ ಮುಂದಾಗಿದ್ದರು.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಸ್ಯಾಮ್ ಈ ವಿಷಯವಾಗಿ ತುಂಬಾ ನೊಂದಿದ್ದಾರೆ. ಸತತವಾಗಿ ಅಳುತ್ತಲೇ ಇದ್ದಾರೆ. ನನಗೆ ಏನು ಮಾಡಬೇಕೆಂಬುದೇ ಗೊತ್ತಾಗುತ್ತಿಲ್ಲ. ಪ್ರತೀ ಬಾರಿ ಅವರು ನನಗೆ ಹೊಡೆದ ಮೇಲೆ, ಸಾರಿ ಎಂದು ಅಳುತ್ತಾರೆ. ಈ ಬಾರಿ ಸಹ ಅವರು ಅದೇ ಮಾಡಿದ್ದಾರೆ. ಅಷ್ಟೇ ಅಲ್ಲ, ಇನ್ನು ಮುಂದೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುವ ಪ್ರಾಮಿಸ್ ಮಾಡಿದ್ದಾರೆ’ ಎಂದು ಹೇಳಿದ್ದರು.
ಈಗ ದೂರು ವಾಪಸ್ಸು ಪಡೆಯುವುದಷ್ಟೇ ಅಲ್ಲ, ಸ್ಯಾಮ್ ಜತೆಗೆ ವಾಸಿಸುವುದಕ್ಕೆ ಪೂನಂ ನಿರ್ಧರಿಸಿದ್ದಾರೆ. ಈ ಕುರಿತು ಇನ್ನೊಂದು ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಎಲ್ಲವೂ ಬಗೆಹರಿದಿದೆ. ನಾವಿಬ್ಬರೂ ಜತೆಯಾಗಿ ವಾಸಿಸುವುದಕ್ಕೆ ತೀರ್ಮಾನಿಸಿದ್ದೇವೆ.
ನಾವಿಬ್ಬರೂ ಪರಸ್ಪರ ತುಂಬಾ ಪ್ರೀತಿಸುತ್ತೇವೆ. ಏನೋ ಕೆಟ್ಟ ಘಳಿಗೆ, ಹೀಗಾಗಿ ಹೋಯಿತು. ಎಲ್ಲಾ ಮದುವೆಗಳಲ್ಲೂ ಈ ರೀತಿಯ ಏರಿಳಿತಗಳು ಇದ್ದೇ ಇರುತ್ತದೆ. ನಮ್ಮ ಲೈಫ್ನಲ್ಲೂ ಹೀಗಾಗಿ ಹೋಯಿತು ಮತ್ತು ಸಿಕ್ಕಾಪಟ್ಟೆ ಸುದ್ದಿಯಾಯಿತು’ ಎಂದು ಅವರು ಹೇಳಿಕೊಂಡಿದ್ದಾರೆ.