Connect with us

DAKSHINA KANNADA

ಗೋಹತ್ಯೆಗೆ ಪೋಲೀಸರಿಂದ ಪರೋಕ್ಷ ಬೆಂಬಲ : ವಿ ಹೆಚ್ ಪಿ ಆರೋಪ

ಮಂಗಳೂರು,ಸೆಪ್ಟಂಬರ್ 01: ಗೋ ವಂಶ ವಧೆಯಾಗಲೀ, ಬಲಿಕೊಡುವುದಾಗಲೀ ಕರ್ನಾಟಕದಲ್ಲಿ ಸಂಪೂರ್ಣ ನಿಷೇಧವಿದೆ.ಆದರೆ ಬಕ್ರೀದ್ ಸಂದರ್ಭದಲ್ಲಿ ಎಗ್ಗಿಲ್ಲದೆ ಗೋವುಗಳ ವಧೆ ನಡೆಯುತ್ತಿದೆ. ವಧೆಗಾಗಿ ತಂದ ಗೋವುಗಳ ಬಗ್ಗೆ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳಲು ಮಂಗಳೂರಿನ ಪೋಲೀಸರು ವಿಫಲರಾಗಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಗೋರಕ್ಷಾ ಪ್ರಮುಖ್ ದಿನೇಶ್ ಕಟೀಲ್, ಬಕ್ರೀದ್ ಗಾಗಿ ಬಲಿಕೊಡಲು ಅಗಸ್ಟ್ 31 ರಂದು ನೂರಕ್ಕೂ ಮಿಕ್ಕಿದ ಗೋವುಗಳನ್ನು ಮಂಗಳೂರಿನ ಕುದ್ರೋಳಿ ಪರಿಸರದಲ್ಲಿ ಕಟ್ಟಿ ಹಾಕಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿಯೊಂದಿಗೆ ಮಂಗಳೂರು ಪೋಲೀಸ್ ಕಮಿಷನರ್ ಗೆ ಕ್ರಮ ಕೈಗೊಳ್ಳುವಂತೆ ಮಾಹಿತಿ ನೀಡಲಾಗಿತ್ತು.ಈ ಸಂಬಂಧ ಕುದ್ರೋಳಿಗೆ ಪರಿಸರಕ್ಕೆ ಭೇಟಿ ನೀಡಿದ್ದ ಪೋಲೀಸ್ ಉಪ ಆಯುಕ್ತರು ಗೋವುಗಳನ್ನು ನೋಡಿಯೂ ಅದರ ವಿರುದ್ಧ ಕ್ರಮ ಕೈಗೊಳ್ಳದೆ ಹಿಂದಿರುಗಿದ್ದಾರೆ ಎಂದು ಅವರು ಆರೋಪಿಸಿದರು. ಗೋವಧೆಯ ಬಗ್ಗೆ ಖಚಿತ ಮಾಹಿತಿ ಕೊಟ್ಟರೂ ಪೋಲೀಸ್ ಇಲಾಖೆ ಗೋಹತ್ಯೆಯನ್ನು ನಿಲ್ಲಿಸಲು ವಿಫಲವಾದ ಪೋಲೀಸರ ವರ್ತನೆಗೆ ಖಂಡನೆ ವ್ಯಕ್ತಪಡಿಸಿದ ಅವರು ಹಿಂದುಗಳಿಗೆ ಪವಿತ್ರವಾದ ಗೋವುಗಳನ್ನು ಪೋಲೀಸರೇ ಹತ್ಯೆ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಹಿಂದುಗಳ ಭಾವನೆಯನ್ನು ಕೆರಳಿಸಿ ಕಾನೂನನ್ನು ಕೈಗೆತ್ತಿಕೊಳ್ಳುವಂತೆ ಪ್ರಚೋದನೆ ನೀಡಿದಂತಾಗಿದೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ರಾಜ್ಯ ಪೋಲೀಸ್ ಮಹಾನಿರ್ದೇಶಕರಾದ ಆರ್.ಕೆ. ದತ್ತಾ ಅವರಿಗೆ ಜಿಲ್ಲೆಯ ಗೋರಕ್ಷಾ ಪ್ರಮುಖರು  ಎಸ್.ಎಂ.ಎಸ್ ಮೂಲಕ ಮಾಹಿತಿ ನೀಡಿದರೂ ಯಾವುದೇ ಪ್ರತಿಕ್ರಿಯೆ ಬಾರದಿರುವುದು ವಿಪರ್ಯಾಸ ಎಂದಿದ್ದಾರೆ. ತನ್ನ ಕರ್ತವ್ಯವನ್ನು ಮರೆತು ಗೋಹತ್ಯೆಗೆ ಅವಕಾಶ ನೀಡಿದ ಪೋಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿರುವ ಅವರುಈ ಬಗ್ಗೆ ಪೋಲೀಸ್ ಮಹಾನಿರ್ದೇಶಕರಿಗೆ ಲಿಖಿತ ದೂರನ್ನೂ ನೀಡಲಾಗುವುದು ಎಂದರು. ವಿಶ್ವ ಹಿಂದೂ ಪರಿಷತ್ ಕಾರ್ಯಧ್ಯಕ್ಷ ಜಗದೀಶ್ ಶೇಣವ, ಜಿಲ್ಲಾ ಕಾರ್ಯದರ್ಶಿ ಗೋಪಾಲ್ ಕುತ್ತಾರ್, ಬಜರಂಗ ದಳ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್, ಜಿಲ್ಲಾ ಸಹ ಸಂಚಾಲಕ ಪ್ರದೀಪ್ ಪಂಪ್ ವೆಲ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Share Information
Advertisement
Click to comment

You must be logged in to post a comment Login

Leave a Reply