LATEST NEWS
ಸಾಲ ಮರುಪಾವತಿ ಹೆಸರಿನಲ್ಲಿ ಕೋಮುದ್ವೇಷ ಹರಡಲು ಯತ್ನಿಸಿದ ಪ್ರಕರಣದ ಕೂಲಂಕುಷ ತನಿಖೆ – ಎಸ್ಪಿ ಲಕ್ಷ್ಮೀ ಪ್ರಸಾದ್

ಸಾಲ ಮರುಪಾವತಿ ಹೆಸರಿನಲ್ಲಿ ಕೋಮುದ್ವೇಷ ಹರಡಲು ಯತ್ನಿಸಿದ ಪ್ರಕರಣದ ಕೂಲಂಕುಷ ತನಿಖೆ – ಎಸ್ಪಿ ಲಕ್ಷ್ಮೀ ಪ್ರಸಾದ್
ಮಂಗಳೂರು, ಮಾರ್ಚ್ 4: ಸಾಲ ವಸೂಲಾತಿ ಸಿಬ್ಬಂದಿಯನ್ನು ತಡೆದುಎರಡು ಕೋಮುಗಳ ನಡುವೆ ದ್ವೇಷ ಹರಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಲಂಕಷವಾಗಿ ತನಿಖೆ ನಡೆಸಲಾಗುವುದು ಎಂದು ಎಸ್ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನಂದಾವರದಲ್ಲಿ ಕೆಲ ಯುವಕರು ವಿತ್ತೀಯ ಸಂಸ್ಥೆಯೊಂದರ ಸಾಲ ವಸೂಲಾತಿ ಸಿಬ್ಬಂದಿಯನ್ನು ತಡೆದು, ಹಳ್ಳಿಯಲ್ಲಿರುವ ಮಹಿಳೆಯರನ್ನು ಮಾತನಾಡಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾಗಿ ಹೇಳಲಾಗಿದ್ದು, ಮಹಿಳಾ ಸಿಬ್ಬಂದಿಯೊಂದಿಗೆ ಬಂದು, ಹಣ ವಸೂಲಾತಿ ನಡೆಸಬೇಕು ಎಂದು ಹೇಳಿರುವುದಾಗಿ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.

ವಿತ್ತೀಯ ಸಂಸ್ಥೆಯೊಂದರ ಸಾಲ ವಸೂಲಾತಿ ಸಿಬ್ಬಂದಿಯನ್ನು ಯುವಕರ ಗುಂಪೊಂದು ತಡೆದು ನಿಲ್ಲಿಸಿ ಮಹಿಳೆಯರು ಮಾತನಾಡಿಸಬಾರದು ಎಂದು ಹೇಳಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು, ಈ ಹಿನ್ನಲೆಯಲ್ಲಿ ಪ್ರಕರಣದ ಗಂಭೀರತೆ ಅರಿತ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಪೊಲೀಸರು ಘಟನೆಯಲ್ಲಿ ಒಳಗೊಂಡವರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದು, ಘಟನೆಯ ಸರಿಯಾದ ಮಾಹಿತಿಯನ್ನು ಕಲೆಹಾಕಿ ಸೂಕ್ತ ಕ್ರಮವನ್ನು ಕಾನೂನು ಪ್ರಕಾರ ಕೈಗೊಳ್ಳುತ್ತೇವೆ ಎಂದು ಎಸ್ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.