KARNATAKA
ತ್ರಿಬಲ್ ರೈಡ್ ನಲ್ಲಿ ಬಂದು ಪೊಲೀಸ್ ಕೈಗೆ ಸಿಕ್ಕಿಹಾಕಿಕೊಂಡ ವಿಧ್ಯಾರ್ಥಿ ಕಣ್ಣೀರಿಗೆ ದಂಡದ ಹಣ ವಾಸಾಪ್ ನೀಡಿದ ಲೇಡಿ ಪಿಎಸ್ಐ
ಬಾಗಲಕೋಟೆ ಜುಲೈ 24: ತ್ರಿಬಲ್ ರೈಡ್ ನಲ್ಲಿ ಬಂದ ವಿಧ್ಯಾರ್ಥಿಗಳನ್ನು ನಿಲ್ಲಿಸಿ ಪೊಲೀಸರು ದಂಡ ಹಾಕಿದ ವೇಳೆ ಫೈನ್ ಪಾವತಿಸಲು ತನ್ನ ಬಳಿ ಹಣವಿಲ್ಲ ಎಂದು ಕಣ್ಣೀರಿಟ್ಟಿದ್ದಾನೆ. ಕಡೆಗೆ ಕಾಲೇಜು ಶುಲ್ಕ ಕಟ್ಟಲು ಇಟ್ಟುಕೊಂಡಿದ್ದ ಹಣವನ್ನೇ ದಂಡವನ್ನಾಗಿ ಕೊಟ್ಟ ಮನಕಲಕುವ ಘಟನೆ ಬಾಗಲಕೋಟೆಯ ಇಳಕಲ್ನಲ್ಲಿ ವರದಿಯಾಗಿದೆ.
ರಸ್ತೆ ಸಂಚಾರ ನಿಯಮ ಪಾಲಿಸದ ಬೈಕ್ ಸವಾರನಿಗೆ ಮಹಿಳಾ ಪೊಲೀಸ್ ಅಧಿಕಾರಿ ದಂಡ ವಿಧಿಸಿದ್ದರು. ಡ್ರೈವಿಂಗ್ ಲೈಸನ್ಸ್ ಇಲ್ಲದೇ ತ್ರಿಬಲ್ ರೈಡ್ ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿಗೆ ಇಳಕಲ್ ನಗರ ಠಾಣಾ ಮಹಿಳಾ ಪಿಎಸ್ಐ ಎಸ್.ಆರ್. ನಾಯಕ್ ಎಂಬುವವರು ಬಾಲಕನಿಗೆ ದಂಡ ಕಟ್ಟುವಂತೆ ಒತ್ತಾಯಿಸಿದ್ದರು. ಆದ್ರೆ, ಕಣ್ಣೀರಿಟ್ಟ ಬಾಲಕ, ನನ್ನ ಬಳಿ ಹಣವಿಲ್ಲ ಆದರೆ, ಕಾಲೇಜು ಶುಲ್ಕ ಕಟ್ಟಲೆಂದು ಇಟ್ಟುಕೊಂಡಿರುವ ದುಡ್ಡಿದೆ ಅಷ್ಟೇ, ಅದನ್ನೇ ತಗೆದುಕೊಳ್ಳಿ ಎಂದು ಬಿಕ್ಕಿ ಬಿಕ್ಕಿ ಅಳುತ್ತ ಕೊಟ್ಟಿದ್ದಾನೆ.
ಬಾಲಕನ ಹೇಳಿಕೆಯನ್ನು ಪರಿಶೀಲಿಸಿದ ಬಳಿಕ ಮಹಿಳಾ ಪಿಎಸ್ಐ ಒಂದು ನಿಮಿಷ ಮೌನಕ್ಕೆ ಜಾರಿದ್ದು, ಆತನ ಸ್ಥಿತಿಗೆ ಕರಗಿದ್ದಾರೆ. ಬಾಲಕನನ್ನು ಅಪ್ಪಿಕೊಂಡು ಸಾಂತ್ವನ ತಿಳಿಸಿ, ತಮ್ಮ ಬಳಿಯಿದ್ದ ದಂಡದ ಹಣವನ್ನು ವಾಪಸ್ ಕೊಟ್ಟು, ಧೈರ್ಯ ತುಂಬಿದ್ದಾರೆ. ಪೋಷಕರು ಮಕ್ಕಳಿಗೆ ಬೈಕ್, ಸ್ಕೂಟರ್ ಕೊಡುವ ಮುನ್ನ ಹತ್ತು ಬಾರಿ ಎಚ್ಚರ ವಹಿಸಿ ಎಂದು ಮಹಿಳಾ ಪಿಎಸ್ಐ ಹೇಳಿದ್ದಾರೆ. ಘಟನೆಯ ದೃಶ್ಯಗಳು ಸದ್ಯ ಜಾಲತಾಣದಲ್ಲಿ ವೈರಲ್ ಆಗಿವೆ.