KARNATAKA
ಭಜರಂಗದಳ ಕಾರ್ಯಕರ್ತ ಹರ್ಷ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಕಲ್ಲು ತೂರಾಟ ಪರಿಸ್ಥಿತಿ ನಿಯಂತ್ರಿಸಲು ಗಾಳಿಯಲ್ಲಿ ಗುಂಡು, ಲಾಠಿಚಾರ್ಚ್

ಶಿವಮೊಗ್ಗ ಫೆಬ್ರವರಿ 21: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಕೊಲೆ ಬಳಿಕ ಪರಿಸ್ಥಿತಿ ಬಿಗಡಾಯಿಸಿದ್ದು, ಇದೀಗ ಹರ್ಷ ಅವರ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಹಲವೆಡೆ ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡುಹಾರಿಸಿ, ಲಾಠಿ ಬೀಸಿದ ಘಟನೆ ನಡೆದಿದೆ.
ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹರ್ಷ ಅವರ ಪಾರ್ಥೀವ ಶರೀರದ ಮೆರವಣಿಗೆ ಸೀಗೆಹಟ್ಟಿಯಿಂದ ಹೊರಟ ಸಿದ್ದಯ್ಯ ರಸ್ತೆಗೆ ಬರುತ್ತಿದ್ದಂತೆ ಬೇರೆ ಬೀದಿಗಳಿಂದ ಕಲ್ಲುಗಳು ತೂರಿಬಂದವು. ಪ್ರತಿಯಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರೂ ಕಲ್ಲು ತೂರಿದರು. ಟಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಗಾಂಧಿ ಬಜಾರ್ ಮಸೀದಿ ಬಳಿ ಬಂದಾಗ ಉದ್ರಿಕ್ತ ಗುಂಪು ಮಸೀದಿಗಳ ಮೇಲೆ ಕಲ್ಲು ತೂರಾಟ ನಡೆಸಿತು. ಕ್ಷಣ ಮಾತ್ರದಲ್ಲಿ ಹಲವು ಬೀದಿಗಳು ರಣರಂಗದಂತೆ ಭಾಸವಾದವು. ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪರಿಸ್ಥಿತಿ ಹತೋಟಿಗೆ ತಂದರು.
ಮೆರವಣಿಗೆಯಲ್ಲಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಭಾಗವಹಿಸಿದ್ದರು. ಶಿವಮೊಗ್ಗ ನಾಯಕ ವೃತ್ತದಿಂದ ಪಿ.ಬಿ.ರಸ್ತೆ ತಲುಪಿದಾಗ ಮತ್ತೆ ಕಲ್ಲು ತೂರಾಟ ನಡೆಯಿತು. ದಾರಿಯ ಉದ್ದಕ್ಕೂ ಜೈಶ್ರೀರಾಮ್ ಘೋಷಣೆ ಮೊಳಗಿದವು. ಮೆರವಣಿಗೆ ರೋಟರಿ ಚಿತಾಗಾರದತ್ತ ಸಾಗಿತು. ನಂತರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.