KARNATAKA
ಕಟುಕರ ಕೈಯಿಂದ ಕರುವನ್ನು ಕಾಪಾಡಿದ ಹೃದಯವಂತ ಇನ್‌ಸ್ಪೆಕ್ಟರ್ ಮಹಮ್ಮದ್ ರಫೀಕ್ ನಿಧನ
ಬೆಂಗಳೂರು: ಕಡಿಯಲು ಅಕ್ರಮ ಸಾಗಾಣೆ ಮಾಡುತ್ತಿದ್ದ ಕರುವೊಂದನ್ನು ರಕ್ಷಿಸಿ ಪೊಲೀಸ್ ಠಾಣೆಯಲ್ಲಿ ಆರೈಕೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ರಾಜ್ಯ ಅಪರಾಧ ದಾಖಲಾತಿ ವಿಭಾಗದ ಇನ್‌ಸ್ಪೆಕ್ಟರ್ ಮಹಮ್ಮದ್ ರಫೀಕ್(50) ಅವರು ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆ.
ಮೈಸೂರಿನ ಮಹಮ್ಮದ್ ರಫೀ, ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯ ಬೈಯಪ್ಪನಹಳ್ಳಿ ಠಾಣೆ, ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಬೈಯಪ್ಪನಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಆಗಿದ್ದ ವೇಳೆಯಲ್ಲಿ ಮಹಮ್ಮದ್ ರಫೀ ಅವರು, ಅಪಾಯಕ್ಕೆ ಸಿಲುಕಿದ್ದ ಕರುವೊಂದನ್ನು ರಕ್ಷಿಸಿದ್ದರು. ಕರು ಮಹಮ್ಮದ್ ಅವರ ಜೊತೆಯಲ್ಲೇ ಠಾಣೆಗೆ ಬಂದಿತ್ತು. ನಂತರ, ಅದಕ್ಕೆ ಭೀಮಾ ಎಂಬ ಹೆಸರಿಟ್ಟು ಮಹಮ್ಮದ್ ಅವರೇ ಸಾಕುತ್ತಿದ್ದರು.
ಮನೆಯಲ್ಲಿ ಸ್ನಾನಕ್ಕೆ ಹೊರಟಿದ್ದ ವೇಳೆ ಮಹಮ್ಮದ್ ರಫೀ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಸುಸ್ತಾಗಿ ಪ್ರಜ್ಞೆ ತಪ್ಪಿದ್ದ ಅವರನ್ನು ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು. ಸದ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.